ಮೈಸೂರು ಒಡೆಯರು - 
 	15ನೆಯ ಶತಮಾನದ ಆದಿಭಾಗದಲ್ಲಿ ಮೈಸೂರು ಜಿಲ್ಲೆಯ ಕೆಲವು ಭಾಗಗಳನ್ನು ಒಳಗೊಂಡಿದ್ದ ಚಿಕ್ಕ ಪಾಳೆಯಪಟ್ಟಿನಲ್ಲಿ ಅಧಿಕಾರ ಸ್ಥಾಪಿಸಿ ರಕ್ಕಸತಂಗಡಿ ಯುದ್ಧದ ತರುವಾಯ ವಿಜಯನಗರ ಸಾಮ್ರಾಜ್ಯ ಶಿಥಿಲವಾಗುತ್ತಿದ್ದ ಕಾಲದಲ್ಲಿ ಕೆಲಕಾಲ ಸಾಮಂತರಾಗಿ ಅನಂತರ ಸ್ವತಂತ್ರರಾಗಿ ದಕ್ಷಿಣ ಕರ್ನಾಟಕದ ಹಲವು ಭಾಗಗಳನ್ನು ಆಕ್ರಮಿಸಿಕೊಂಡು ಮುಂದೆ ತಮ್ಮ ಪ್ರಭಾವವನ್ನು ಸುತ್ತಣ ಪ್ರದೇಶಗಳಿಗೂ ವಿಸ್ತರಿಸಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಕೆಲಕಾಲ ಲುಪ್ತವಾಗಿದ್ದ ಅಧಿಕಾರವನ್ನು ಮತ್ತೆ ಬ್ರಿಟಿಷರ ಸಹಾಯದಿಂದ ಪಡೆದು, ಅವರ ಅಧೀನತ್ವದಲ್ಲಿ ಈ ರಾಜ್ಯ ಭಾರತ ಒಕ್ಕೂಟದಲ್ಲಿ ಸೇರಿಹೋಗುವ ತನಕ (1948) ಆಳಿದ ರಾಜಮನೆತನ, ವಿಜಯನಗರ ಸಾಮ್ರಾಜ್ಯ ನಶಿಸಿದ ಮೇಲೆ ಆ ರಾಜ್ಯ ಬಿತ್ತಿಬೆಳೆಸಿದ ಹಲವು ಧ್ಯೇಯ ಮತ್ತು ಸಂಪ್ರದಾಯಗಳನ್ನು ಮುಂದುವರಿಸಿದ ಕೀರ್ತಿ ಮೈಸೂರಿನ ಒಡೆಯರ ವಂಶದ್ದು. ಈ ದೃಷ್ಟಿಯಲ್ಲಿ ಮೈಸೂರುಒಡೆಯರ ರಾಜ್ಯ ದಕ್ಷಿಣ ಭಾರತದಲ್ಲಿ ಆಳಿದ ಇತರ ಎಲ್ಲ ವಿಜಯನಗರೋತ್ತರ ರಾಜ್ಯಗಳಿಗೂ ಶಿಖರಪ್ರಾಯವಾಗಿತ್ತು.

ರಾಜಕೀಯ ಇತಿಹಾಸ : ಶ್ರೀರಂಗಪಟ್ಟಣ ಮತ್ತು ಮೈಸೂರು ಈ ವಂಶದ ಅರಸರ ರಾಜಧಾನಿಗಳಾಗಿದ್ದವು. ರಾಜಾಧಿರಾಜ, ರಾಜಪರಮೇಶ್ವರ, ಅಪ್ರತಿಮ ವೀರ, ಬಿರುದೆಂತೆಂಬರಗಂಡ, ಕರ್ಣಾಟಕ ಸಿಂಹಾಸನಾಧೀಶ್ವರ ಇತ್ಯಾದಿ ಹಲವು ಬಿರುದುಗಳನ್ನು ಈ ವಂಶದ ಅರಸರು ಬಳಸುತ್ತಿದ್ದರು. ದಕ್ಷಿಣ ಕರ್ನಾಟಕದಲ್ಲಿ ದೊರಕುವ ಇವರ ಹಲವಾರು ಶಿಲಾ ಹಾಗೂ ತಾಮ್ರಶಾಸನಗಳು, ಮೈಸೂರು ಅರಮನೆ, ಮೈಸೂರು ಸರ್ಕಾರ, ದೆಹಲಿಯ ರಾಷ್ಟ್ರೀಯ ಪತ್ರಾಗಾರ, ಲಂಡನ್ನಿನ ಇಂಡಿಯಾ ಹೌಸ್ ಮುಂತಾದೆಡೆಗಳಲ್ಲಿರುವ ರಾಜಕೀಯ ದಾಖಲೆ ಪತ್ರಗಳು ಈ ರಾಜವಂಶದ ಇತಿಹಾಸವನ್ನು ರಚಿಸಲು ಮೂಲಾಧಾರಗಳು. ಇವಲ್ಲದೆ ಮೈಸೂರು ದೊರೆಗಳ ವಂಶಾವಳಿ, ಮೈಸೂರು ದೊರೆಗಳ ಪೂರ್ವಾಭ್ಯುದಯ ವಿವರ, ಮೈಸೂರು ನಗರ ಪೋರ್ವೋತ್ತರ, ಮೈಸೂರು ರಾಜರ ಚರಿತ್ರೆ, ಕಳಲೆ ಅರಸುಗಳ ವಂಶಾವಳಿ, ಕಂಠೀರವ ನರಸರಾಜವಿಜಯ, ಚಿಕ್ಕದೇವರಾಯ ವಂಶಾವಳಿ, ಚಿಕ್ಕದೇವರಾಜವಿಜಯಂ, ಅಪ್ರತಿಮವೀರಚರಿತ್ರೆ ಮುಂತಾದ ಐತಿಹಾಸಿಕ ಗ್ರಂಥಗಳೂ ಸಹಾಯಕವಾಗಿವೆ.

	ಈ ವಂಶದ ಮೊದಲ ಇತಿಹಾಸ ಅಸ್ಪಷ್ಟ. ಇದರ ಸ್ಥಾಪಕನಾದ ಯದುರಾಯ ಸೋದರ ಕೃಷ್ಣರಾಯನೊಡನೆ ದ್ವಾರಕೆಯಿಂದ ಇಲ್ಲಿ ಬಂದು ನೆಲೆಸಿದನೆಂಬ ಐತಿಹ್ಯವಿದೆಯಾದರೂ ಶಾಸನಗಳಲ್ಲಿ ಇದ ಪ್ರಸ್ತಾಪ ಬರುವುದಿಲ್ಲ. ಆದ್ಯನಾದ ಯದುರಾಯ (ಸು. 1399-1423) ಸುಸಂದರ್ಭವೊದಗಿದಾಗ, ಮೈಸೂರಿನ ಆಗ್ನೇಯದಲ್ಲಿರುವ ಹದಿನಾಡು (ನಂಜನಗೂಡು ತಾಲ್ಲೂಕು ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬೇಕು. ಈ ಸಂದರ್ಭದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅನವ ಮೇಲಿನ ಗೌರವದಿಂದ ತಮ್ಮ ಹೆಸರಿನೊಡನೆ ಮೈಸೂರು ಅರಸರು ಒಡೆಯರು ಎಂಬ ಹೆಸರನ್ನು ಸೇರಿಸಿಕೊಳ್ಳುವ ಪರಿಪಾಠ ಬೆಳೆಯಿತೆಂದೂ ಪ್ರತೀತಿ. ಮುಂದಿನ ಅರಸರೆಲ್ಲ ಈ ಒಡೆಯರು ಎಂಬ ಕುಲನಾಮವನ್ನು ಬಳಸಿದರು.

	ಯದುರಾಯನ ಅನಂತರ ಚಾಮರಾಜ (1423-59) , ತಿಮ್ಮರಾಜ-I (1459-78) ಹಿರಿಯ ಚಾಮರಾಜ_II (1478 - 1513), ಹಿರಿಯ ಬೆಟ್ಟದ ಚಾಮರಾಜ-III (1513-53), ಈ ಪುತ್ರಿ ಪರಂಪರೆಯಲ್ಲಿ ಕ್ರಮವಾಗಿ ಆಳಿದರು. ಮೂರನೆಯ ಚಾಮರಾಜನ ಮಗ ಎರಡನೆಯ ತಿಮ್ಮರಾಜ (1553-72) ಪಾಳೆಯಗಾರರನ್ನು ಗೆದ್ದುಬಿರುದೆಂತೆಂಬರಗಂಡ ಎಂಬ ಬಿರುದನ್ನು ಪಡೆದುಕೊಂಡ. ಅನಂತರ ಆತನ ಕಿರಿನ ತಮ್ಮ ಬೋಳ ಚಾಮರಾಜ (1572-76) ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನ್ನು ಜಯಿಸಿ ಅವನು ಬಳಸುತ್ತಿದ್ದ ಸುಗುಣ ಗಂಭೀರ ಎಂಬ ಬಿರುದನ್ನು ತಾನೇ ಧರಿಸಿದ. ಆತನ ಅಣ್ಣ ಕೃಷ್ಣರಾಜನ ಮಗ ಬೆಟ್ಟದ ದೇವರಾಜ (1576-78) ಕೆಲಕಾಲ ಆಳಿವಿರಕ್ತನಾಗಿ ತಮ್ಮನಾದ ರಾಜಒಡೆಯನಿಗೆ ಮೈಸೂರಿನಲ್ಲಿ ಪಟ್ಟಾಭಿಷೇಕವನ್ನು ಮಾಡಿಸಿದ.

	ಒಡೆಯರ ವಂಶದ ಚರಿತ್ರೆ ಸ್ಪಷ್ಟವಾಗಿ ಪ್ರಾರಂಭವಾಗುವುದು ಈ ಕಾಲದಲ್ಲಿ. ಕೇವಲ 33 ಹಳ್ಳಿಗಳನ್ನು ಹೊಂದಿದ್ದ ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವಾಗಿ ವಿಸ್ತರಿಸಿದವನು ರಾಜಒಡೆಯರ್ (1578-1617). ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ವಿಜಯನಗರದ ಪ್ರತಿನಿಧಿ ತಿರುಮಲರಾಯನಿಗೂ ವಿಜಯನಗರದ ಅರಸು ವೆಂಕಟನಿಗೂ ವೈಮನಸ್ಯವಿದ್ದ ಸಂದರ್ಭದಲ್ಲಿ ರಾಜೊಡೆಯ ತಿರುಮಲನನ್ನು ಅಲಕ್ಷಿಸಿ ಮೈಸೂರಿನಲ್ಲಿ ಕೋಟೆಯನ್ನು ಕಟ್ಟಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡ. ಕೊನೆಗೆ ತಿರುಮಲನನ್ನೂ ಎದುರಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ಅರಸನಾದ. ವೆಂಕಟನ ಒಪ್ಪಿಗೆ ಪಡೆದು ಸ್ವತಃ ಈ ಭಾಗದಲ್ಲಿ ವಿಜಯನಗರದ ಪ್ರತಿನಿಧಿಯಾದ. ವೆಂಕಟ ಮೈಸೂರಿನ ಸಮೀಪದ ಕೆಲವು ಭಾಗಗಳನ್ನು ಅನೇಕ ಚಿಕ್ಕಪುಟ್ಟ ಪಾಳೆಯಪಟ್ಟುಗಳನ್ನೆಲ್ಲ ಸದೆಬಡಿದ. ಶ್ರೀರಂಗಪಟ್ಟಣ ಮತ್ತು ಸುಮಾರು ಇಂದಿನ ಇಡೀ ಮೈಸೂರು ಜಿಲ್ಲೆ ಇವನ ವಶಕ್ಕೆ ಬಂದಿತು.

	ಅನಂತರ ಪಟ್ಟಕ್ಕೆ ಬಂದ ರಾಜಒಡೆಯನ ಮೊಮ್ಮಗ ಚಾಮರಾಜ ಒಡೆಯನ ಕಾಲದಲ್ಲಿ (1617 - 37) ರಾಜ್ಯವಿಸ್ತರಣೆ ಮುಂದುವರಿದು, ಆತ ತಲಕಾಡು, ಹೊಳೆನರಸೀಪುರ ಮುಂತಾದ ಪಾಳೆಯಪಟ್ಟುಗಳನ್ನು ಮುರಿದುದಲ್ಲದೆ ಹಾಸನ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಕೆಲವು ಭಾಗಗಳನ್ನೂ ಮೈಸೂರು ರಾಜ್ಯ ಒಳಗೊಳ್ಳುವಂತೆ ಮಾಡಿದ. ಆ ಸಮಯದಲ್ಲಿ ಬಹು ಬಲಿಷ್ಠವಾಗಿದ್ದ ಕೆಳದಿಯ ಅರಸರ ಮೇಲೂ ದಂಡೆತ್ತಿಹೋಗುವ ಮಟ್ಟಿಗೆ ಮೈಸೂರಿನ ಶಕ್ತಿ ಬೆಳೆದಿತ್ತು.

	ಅನಂತರದ ದೊರೆ ಇಮ್ಮಡಿ ರಾಜಒಡೆಯರ್ (1637-38) ದಳವಾಯಿ ವಿಕ್ರಮರಾಯನ ಕುತಂತ್ರದಿಂದ ಕೊಲೆಯಾದ ಮೇಲೆ ಪಟ್ಟಕ್ಕೆ ಬಂದ ರಣಧೀರ ಕಂಠೀರವ ನರಸರಾಜ ಒಡೆಯ_I (1638-59) ಬಹು ಬಲಿಷ್ಠನಾಗಿದ್ದ. ಈತ ಸಾಂಬಳ್ಳಿ, ಕಾವೇರಿ ಪುರ, ದಂಟಳ್ಳಿ, ಸಿಂಗಾನಲ್ಲೂರು, ತುರುವೇಕೆರೆ, ಆನೆಬಾಗೂರು, ತೋಳ್ಯ, ಚಂಗಪ್ಪಾಡಿ, ಮಾರಟ ಹಳ್ಳಿ, ಹಂಪಾಪುರ. ಪಿರಿಯಾಪಟ್ಟನ, ಬೆಟ್ಟದಪುರ, ರುದ್ರಪಟ್ಟಣ, ಕಣ್ಣಾಗಾಲ (ಪಿರಿಯಾ ಪಟ್ಟಣದ ಬಳಿಯ ) ಕಿತ್ತೂರು, ನಂಜರಾಜಪಟ್ಟಣ, ಕರ್ಲೂರು, ಕಡಬ, ಮಾಯಸಮುದ್ರ, ಅರಕಲಗೂಡು, ಬಸವಪಟ್ಟಣ, ಹೆಬ್ಬೂರು, ಸೂಳಕೆರೆದುರ್ಗ, ಯಲಹಂಕನಾಡು, ಚೆನ್ನಗಿರಿ, ಗನ್ನಿಗ್ರಾಮ, ಮಾದಾಪುರ, ಕತ್ತರಿಘಟ್ಟ, ರತ್ನಗಿರಿ, ವೀರಭದ್ರನದುರ್ಗ, ಡಂಕಣಕೋಟೆ, ಸತ್ಯಮಂಗಲ, ಹೊಸೂರು, ಇವುಗಳನ್ನು ಗೆದ್ದುಕೊಂಡ ಬಿಜಾಪುರದ ರಣದುಲ್ಲಾಖಾನನೊಡನೆ ಹೋರಾಡಿ ಗೆದ್ದ, ಶ್ರೀರಂಗಪಟ್ಟಣ ಮತ್ತು ಮೈಸೂರು ರಾಜ್ಯದ ಸಂಪತ್ತನ್ನೂ ಶಕ್ತಿಯನ್ನೂ ವರ್ಧಿಸಿದ. ಪಶ್ಚಿಮದಲ್ಲಿ ಕೊಡಗಿನವರೆಗೂ ದಕ್ಷಿಣದಲ್ಲಿ ಸತ್ಯಮಂಗಲ ಮತ್ತು ಡಣಾಯಕನ ಕೋಟೆ, ಆಗ್ನೇಯದಲ್ಲಿ ಕಾವೇರಿ ಪಟ್ಟಣದವರೆಗೂ ಈತನ ರಾಜ್ಯ ವಿಸ್ತರಿಸಿತು. ನರಸರಾಜನ ಉತ್ತರಾಧಿಕಾರಿಯಾದ ದೇವರಾಜ ಒಡೆಯ (1659-73) ಬಿಜಾಪುರ ಮತ್ತು ಗೋಲ್ಕೊಂಡದ ಸುಲ್ತಾನರು, ಕೆಳದಿಯ ನಾಯಕರು ಹಾಗೂ ಮಧುರೆಯ ನಾಯಕನ ಮೇಲೆ ಯುದ್ಧಗಳನ್ನು ನಡೆಸಿ ರಾಜ್ಯವನ್ನು ಪೂರ್ವದಲ್ಲಿ ಸೇಲಮ್ ದಕ್ಷಿಣದಲ್ಲಿ ಕೊಯಮತ್ತೂರು ಜಿಲ್ಲೆಯ ಧಾರಾಪುರ, ಉತ್ತರದಲ್ಲಿ ಚಿಕ್ಕನಾಯಕಹಳ್ಳಿಯವರೆಗೂ ವಿಸ್ತರಿಸಿದ.

	ಶೂರನೂ ದಕ್ಷನೂ ಆದ ಚಿಕ್ಕದೇವರಾಜ ಒಡೆಯ (1673-1704) ದೇವರಾಜ ಒಡೆಯನ ಹಿರಿಯ ಸೋದರನಾದ ದೊಡ್ಡದೇವರಾಜ ಒಡೆಯನ ಮಗ. ಈತ ಪಟ್ಟಕ್ಕೆ ಬಂದ ತರುವಾಯ ದೇವನಗಿರಿ, ಕೂಡ್ಲಿಗೆರೆ, ಕೊರಟಗೆರೆ, ಕುದೂರು, ವೀರಣ್ಣನ ದುರ್ಗ, ಮಧುಗಿರಿಯ ಕುಂಬಿ, ಹೊಸೂರು, ತುಮಕೂರು, ಕಂದಿಕೆರೆ, ತ್ಯಾಮಗೊಂಡ್ಲು, ಬೆಂಗಳೂರು, ಅವನಿ, ಪೆರೂರು, ಹೊಸಕೋಟೆ, ಮನುಗೊಂಡ ದುರ್ಗ, ಮನ್ನಾರಗುಡಿ, ವಾಮಲೂರು, ಧರ್ಮಪುರಿ, ಕಾವೇರಿಪಟ್ಟಣ ಅನಂತಗಿರಿ, ಬಾಗಡಿ, ಹಾರನಹಳ್ಳಿ, ಭಾಣಾವರ, ಕಡೂರು, ಸಕ್ಕರೆಪಟ್ಟಣ, ಬೇಲೂರು, ವಸ್ತಾರೆ, ಚಿಕ್ಕಮಗಳೂರು, ಮಹಾರಾಜನದುರ್ಗ, ಹಾಸನ. ಅರಕಲಗೂಡು, ಐಗೂರು, ಸಕಲೇಶಪುರ, ಕೊಡ್ಲಿಪೇಟಿ, ಶಾದಮಂಗಲ, ನಾಮಕಲ್ಲು ತಮ್ಮಂಬಟ್ಟಿ ಇವುಗಳನ್ನು ಸಾಧಿಸಿಕೊಂಡು ದಕ್ಷಿಣ ಭಾರತದ ಅಪ್ರತಿಮ ವೀರನಾಗಿ, ಉತ್ತರದಲ್ಲಿ ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಂದ ಹಿಡಿದು ದಕ್ಷಿಣದಲ್ಲಿ ಪಳನಿ, ಆನೆಮಲೈವರೆಗೂ ಪಶ್ಚಿಮದಲ್ಲಿ ಕೊಡಗು, ಬೇಲೂರಿನಿಂದ ಹಿಡಿದು ಪೂರ್ವದಲ್ಲಿ ಸೇಲಮ್‍ವರೆಗೂ ಹಬ್ಬಿದ ವಿಶಾಲರಾಜ್ಯಕ್ಕೆ ಅಧಿಪತಿಯಾದ. ಆಡಳಿತವನ್ನು ವ್ಯವಸ್ಥೆಗೊಳಿಸಿದ. ಹೊಸ ಪ್ರದೇಶಗಳನ್ನು ಸಾಗುವಳಿಗೆ ಒಳಪಡಿಸಿ ದೇಶದ ಹಾಗೂ ಕೋಶದ ಸಂಪತ್ತನ್ನು ಹೆಚ್ಚಿಸಿದ. ಶ್ರೀಮಂತನಾಗಿ ನವಕೋಟಿ ನಾರಾಯಣನೆಂಬ ಹೆಸರು ಗಳಿಸಿದ. ದೆಹಲಿಯ ಬಾದಷಹನಿಂದ ಅನೇಕ ಸನ್ಮಾನಗಳನ್ನು ಪಡೆದ. ಇದು ಮೈಸೂರು ಇತಿಹಾಸದ ಉಚ್ಛ್ರಾಯಕಾಲ.

	ಚಿಕ್ಕದೇವರಾಜನ ಮಗ ಇಮ್ಮಡಿ ಕಂಠೀರವಚ ನರಸರಾಜ (1704-14) ಮೂಕನೂ ನಿರ್ಬಲನೂ ಆಗಿದ್ದುದರಿಂದ ರಾಜ್ಯದ ಆಡಳಿತದಲ್ಲಿ ದಳವಾಯಿಗಳ ಕೈವಾಡ ಹೆಚ್ಚಾಯಿತು. ಅವರಲ್ಲಿ ಮುಖ್ಯವಾದವರು ಕಳಲೆಯ ದಳವಾಯಿಗಳು. 

ಚಿತ್ರ-1
	
	ಮೈಸೂರಿನ ಇತಿಹಾಸದಲ್ಲಿ ಚಿಕ್ಕದೇವರಾಜನ ಅನಂತರದ ಕಾಲವನ್ನು ದಳವಾಯಿಗಳ ಕಾಲ ಎಂದೇ ಕರೆಯಬಹುದು. ದೊಡ್ಡ ಕೃಷ್ಣರಾಜನ (ಕೃಷ್ಣರಾಜ ಒಡೆಯರ್-I) ಕಾಲದಲ್ಲಿ (1714-32) ಮುಸಲ್ಮಾನ ಮತ್ತು ಮರಾಠರ ದಾಳಿಗಳಿಂದ ಮೈಸೂರು ಬೊಕ್ಕಸ ಬರಿದಾಯಿತು. ರಾಜ್ಯದ ಸ್ಥಿತಿ ಹದಗೆಟ್ಟಿತು. ಅನಂತರ ಸಿಂಹಾಸನವೇರಿದ ಆತನ ದತ್ತುಪುತ್ರ ಅರನೆಯ ಚಾಮರಾಜ (1732-34) ದಳವಾಯಿ ದೇವರಾಜಯ್ಯನ ದ್ರೋಹದಿಂದ ಕಬ್ಬಾಳು ದುರ್ಗದ ಸೆರೆಯಲ್ಲೇ ತನ್ನ ಜೀವಿತವನ್ನು ಕಳೆದ. ಅನಂತರ ಪಟ್ಟಕ್ಕೆ ಬಂದ ಇಮ್ಮಡಿ ಕೃಷ್ಣರಾಜ (1734-66) ಕಾಲದಲ್ಲಿ ಹೈದರನ ಅಧಿಕಾರ ಬೆಳೆಯತೊಡಗಿ ಕೊನೆಗೆ ಹೈದರ್ ಸರ್ವಾಧಿಕಾರಿಯಾದ. ಆತ ಮತ್ತು ಆತನ ಮಗ ಟಿಪ್ಪುಸುಲ್ತಾನನೂ ವಸ್ತುತಃ ಸಾವಭೌಮರಾದರು. ಇವರಿಬ್ಬರ ಆಳ್ವಿಕೆಯಲ್ಲಿ ಮೈಸೂರು ರಾಜ್ಯ ಬಹುವಾಗಿ ವಿಸ್ತರಿಸಿ ದಕ್ಷಿಣ ಭಾರತದ ಬೃಹತ್ ರಾಜಕೀಯ ಬಲವಾಗಿ ನೆಲೆಗೊಂಡರೂ ಮೈಸೂರು ರಾಜವಂಶದವರ ಕೈವಾಡವೇನೂ ಇದರಲ್ಲಿರಲಿಲ್ಲ.

	ಈ ಸಂದರ್ಭದಲ್ಲಿ ಬಲು ಚಿಕ್ಕವಯಸ್ಸಿನಲ್ಲೇ ವಿಧವೆಯಾದ ಇಮ್ಮಡಿ ಕೃಷ್ಣರಾಜನ ಪತ್ನಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಮೈಸೂರು ರಾಜವಂಶದ ಆಳ್ವಿಕೆ ಅಳಿಯದಂತೆ ನೋಡಿಕೊಳ್ಳುವ ಪ್ರಯತ್ನ ನಡೆಸಿದಳು. ಹೈದರ್ ಅಲಿ ಮತ್ತು ಟಪ್ಪುಸುಲ್ತಾನರ ಆಳ್ವಿಕೆಯಲ್ಲಿ ರಾಜಮನೆತನ ಹಲವು ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಧೃತಿಗೆಡದೆ, ಆಗಾಗ್ಗೆ ಮರಾಠರು ಮತ್ತು ಬ್ರಿಟಿಷರೊಡನೆ ಗುಪ್ತಸಂದಾನ ನಡೆಸುತ್ತಿದ್ದಳು. ವಂಶದ ಕುಡಿಗಳೂ ದುರದೃಷ್ಟವಶಾತ್ ಅಥವಾ ಕುತಂತ್ರದಿಂದ ಕಮರಿದಾಗ ಮಕ್ಕಳನ್ನು ದತ್ತು ತೆಗೆದುಕೊಂಡು ತನ್ನ ಪ್ರಯತ್ನ ಮುಂದುವರೆಸಿದಳು.

	1799ರಲ್ಲಿ ಶ್ರೀರಂಗಪಟ್ಟಣ ಬ್ರಿಟಿಷರ ಕೈವಶವಾಗಿ ಟಿಪ್ಪುಸುಲ್ತಾನ್ ಮೃತನಾದಾಗ ಬ್ರಿಟಿಷರು ಮೈಸೂರು ರಾಜವಂಶಕ್ಕೆ ಮತ್ತೆ ಚೇತನ ನೀಡಿದರು. ಐದು ವರ್ಷಗಳ ಬಾಲಕ ಮುಮ್ಮುಡಿ ಕೃಷ್ಣರಾಜನ ಪಟ್ಟಾಭಿಷೇಕವಾಯಿತು. ದಿವಾನ್ ಪೂರ್ಣಯ್ಯನ ನುರಿತ ಆಡಳಿತ ಮತ್ತು ಬ್ರಿಟಿಷ್ ರೆಸಿಡೆಂಟರ ಮೇಲ್ವಿಚಾರಣೆಯಲ್ಲಿ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥಿತವಾಯಿತು. ಮುಮ್ಮುಡಿಕೃಷ್ಣರಾಯ ಒಡೆಯರ ಆಳ್ವಿಕೆಯಲ್ಲಿ ಮೊದಲ ವರ್ಷಗಳು ದಂಗೆಗಳಾದರೂ ಅವನ್ನು ನಿವಾರಿಸಲಾಯಿತು. ಆದರೆ ಅವರ ಕಾಲದಲ್ಲಿ ಎರಡು ಕ್ಷಾಮಗಳು ತಲೆದೋರಿದ್ದರಿಂದಲೂ 1830ರಲ್ಲಿ ನಗರ ಪ್ರಾಂತ್ಯದಲ್ಲಿ ಬಂಡಾಯ ನಡೆದಿದ್ದರಿಂದಲೂ ದೇಶದ ಪರಿಸ್ಥಿತಿ ಕೆಟ್ಟಿತು. ಬ್ರಿಟಿಷರು ಈ ಸ್ಥಿತಿಗೆ ಮುಮ್ಮುಡಿ ಕೃಷ್ಣರಾಯ ಒಡೆಯರ ಆಡಳಿತ ನೀತಿಯೇ ಕಾರಣವೆಂಬ ನೆವದಿಂದ ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ನೇರ ಆಡಳಿತವನ್ನು ಜಾರಿ ಮಾಡಿದರು. ರಾಜ್ಯದ ಅಧಿಕಾರ ಪುನಃ ಮೈಸೂರು ಒಡೆಯರ ಕೈತಪ್ಪಿತು (1831).

	ಐವತ್ತು ವರ್ಷಗಳ ರೆಸಿಡೆಂಟ್ ಪ್ರಭುತ್ವದ ಅನಂತರ ರಾಜ್ಯ ಮತ್ತ ಮೈಸೂರು ರಾಜರಿಗೆ ಹಸ್ತಾಂತವಾಯಿತು. ಆಗ ಪಟ್ಟಕ್ಕೆ ಬಂದ ಒಂಬತ್ತನೆಯ ಚಾಮರಾಜ ಒಡೆಯರು ದಿವಾನರಾದ ರಂಗಾಚಾರ್ಲು ಮತ್ತು ಕೆ. ಶೇಷಾದ್ರಿ ಅಯ್ಯರ್ ಅವರುಗಳ ನೆರವಿನಿಂದ ಮೈಸೂರು ಸಂಸ್ಥಾನದಲ್ಲಿ ರೈಲ್ವೆ ಸ್ಥಾಪನೆ, ಕಟ್ಟೆ, ನಾಲೆಗಳ ರಚನೆ ಮುಂತಾದ ಜನೋಪಯೋಗಿ ಕಾರ್ಯಗಳನ್ನೂ ರಾಜಪ್ರತಿನಿಧಿಸಭೆ ಮೊದಲಾದ ರಾಜಕೀಯ ಸಂಸ್ಥೆಗಳನ್ನೂ ಪ್ರಾರಂಭಿಸಿದ್ದಲ್ಲದೆ, ಆಡಳಿತ, ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿ ವಿಭಾಗಗಳನ್ನು ಬೆಳೆಸಿ ಮೈಸೂರು ಮಾದರಿ ಸಂಸ್ಥಾನವಾಗುವಂತೆ ಮಾಡಿದರು.

	ಅನಂತರ ಇವರ ಹಿರಿಯಮಗ ನಾಲವಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ಇವರು ದೇಶದ ಸ್ಥಿತಿಯನ್ನು ಉತ್ತಮಪಡಿಸುವ ಹಲವಾರು ಕ್ರಮಗಳನ್ನು ಕೈಗೊಂಡರು. ಕನ್ನಂಬಾಡಿ ಕಟ್ಟೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಶಿವನಸಮುದ್ರದ ವಿದ್ಯುತ್ ಯೋಜನೆ ಮುಂತಾದ ಉಪಯೋಗಿ ಕಾರ್ಯಗಳನ್ನು ಕೈಕೊಂಡುದಲ್ಲದೆ, ರಾಜ್ಯದಲ್ಲಿ ವಿದ್ಯಾಭ್ಯಾಸದ ಅಭಿವೃದ್ಧಿಗಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಿದರು. ರಾಜ್ಯಾಡಳಿತದಲ್ಲಿ ಪ್ರಜೆಗಳಿಗೆ ಸಾಕಷ್ಟು ಅವಕಾಶ ಇರಬೇಕೆಂಬ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ದಿಪಡಿಸಿದರು. ಪ್ರಜಾಪ್ರತಿನಿಧಿ ಸಭೆಯನ್ನು ಪರಿಷ್ಕರಿಸಿದರು. ಹಲವಾರು ಲೋಕೋಪಯೋಗಿ ಕಾರ್ಯಗಳನ್ನು ಕೈಕೊಂಡು ಜನಪ್ರಿಯರಾದರು. ಇವರ ಕಾರ್ಯಸಾಧನೆಗಳಿಂದ ಅಂದಿನ ಮೈಸೂರು ಸಂಸ್ಥಾನ ಇತರ ಎಲ್ಲ ದೇಶೀಯ ಸಂಸ್ಥಾನಗಳಿಗಿಂತ ಬಹು ಮುಂದುವರಿದಿದ್ದರೆಂಬ ಖ್ಯಾತಿಯನ್ನು ಪಡೆಯಿತು. ಈ ಸಾಧನೆಗಳಿಗೆ ಸಮರ್ಥರಾದ ಪಿ. ಎನ್, ಕೃಷ್ಣಮೂರ್ತಿ, ಕಾಂತರಾಜ ಅರಸು, ಎಂ. ವಿಶ್ವೇಶ್ವರಯ್ಯ, ವಿರ್ಜಾ ಇಸ್ಮಾಯಿಲ್ ಈ ದಿವಾನರುಗಳ ಸೇವೆಯೂ ಮುಖ್ಯವಾಗಿ ದೊರಕಿತು.

	ನಾಲ್ವಡಿ ಕೃಷ್ಣರಾಜ ಒಡೆಯರ ಮರಣಾನಂತರ ಯುವರಾಜ ಕಂಠೀರವ ನರಸರಾಜ ಒಡೆಯರ ಮಗ ಜಯಚಾಮರಾಜ ಒಡೆಯರ್ ಪಟ್ಟಕ್ಕೆ ಬಂದರು (8-9-1940). ದೊಡ್ಡಪ್ಪನ ಸಾಧನೆಗಳನ್ನು ಮುಂದುವರಿಸಿಕೊಂಡು ಬಂದು ದೇಶದ ಅಭಿವೃದ್ಧಿಗೆ ಮತ್ತಷ್ಟು ಕಾರಣರಾದರು. 1947 ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ ಮೈಸೂರು ಸಂಸ್ಥಾನ ಇದರ ಕಕ್ಷೆಯಲ್ಲಿರುವಂತೆ 1948 ರಲ್ಲಿ ಒಪ್ಪಂದ ಮಾಡಿಕೊಂಡರು. ಭಾರತ ಗಣರಾಜ್ಯವಾಗುವ ತನಕ (1950 ಜನವರಿ 26) ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದರು. ಇಲ್ಲಿಗೆ ಮೈಸೂರು ರಾಜತ್ವ ಕೊನೆಗೊಂಡಿತು. ಸಂಸ್ಥಾನದ ರಾಜಪ್ರಮುಖರಾಗಿಯೂ ಸೇವೆ ಸಲ್ಲಿಸಿದರು.

ಆಡಳಿತ ವ್ಯವಸ್ಥೆ : ಮೈಸೂರು ಒಡೆಯರು ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾಗಿದ್ದುದರಿಂದ ಆಡಳಿತ ಪದ್ಧತಿಯಲ್ಲಿ ಮೊದಲು ಇವರು ವಿಜಯನಗರದ ಪದ್ಧತಿಯನ್ನೇ ಅನುಸರಿಸಿದರು. ಕಾಲಕ್ರಮದಲ್ಲಿ ಇವರು ಪ್ರಬಲರಾದಂತೆ ಆಡಳಿತ ಪದ್ಧತಿಯಲ್ಲಿ ಹಲವು ಮಾರ್ಪಾಟುಗಳನ್ನು ಮಾಡಿಕೊಂಡರು.

	ರಾಜ ಒಡೆಯ ಶ್ರೀರಂಗಪಟ್ಟಣವನ್ನಾಕ್ರಮಿಸಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದಮೇಲೆ ದಳವಾಯಿ ಸರ್ವಾದಿಕಾರಿಗಳನ್ನು ಆಡಳಿತ ನಿರ್ವಹಣೆಗಾಗಿ ನೇಮಿಸಿದ. ಪ್ರತಿ ಗ್ರಾಮದಲ್ಲಿಯೂ ಮೇಲ್ವಿಚಾರಣೆ ರಕ್ಷಣೆ ಮತ್ತು ಕಂದಾಯ ವಸೂಲಿಗಳಿಗಾಗಿ ಅಧಿಕಾರಿಗಳನ್ನು ನೇಮಿಸಲಾಯಿತು. ರಾಜ್ಯವಿಸ್ತಾರವಾದಂತೆ ಒಳಾಡಳಿತವನ್ನು ನೋಡಿಕೊಳ್ಳಲು ಕಾರ್ಯಕರ್ತರನ್ನು ನೇಮಿಸಲಾಯಿತು. ಕಂಠೀರವ ನರಸರಾಜ ದೂರದೃಷ್ಟಿಯುಳ್ಳ ಆಡಳಿತಗಾರನಾಗಿದ್ದ. ದಳವಾಯಿಗಳು ಸೈನ್ಯವನ್ನು ತಮ್ಮ ಅಂಕಿದಲ್ಲಿಟ್ಟುಕೊಂಡು ಪ್ರಜಾಡಳಿತದಲ್ಲಿಯೂ ಕೈವಾಡ ನಡೆಸುತ್ತಿದ್ದುದನ್ನು ತಪ್ಪಿಸಿ ತಾನೇ ಅಧಿಕಾರವನ್ನು ಕೈಯಲ್ಲಿರಿಸಿಕೊಂಡಿದ್ದ ಇವನು ಟಂಕಸಾಲೆ ಸ್ಥಾಪಿಸಿದ. ಚಿಕ್ಕದೇವರಾಜ ಪಂಚಪ್ರಧಾನರನ್ನೊಳಗೊಂಡ ಸಚಿವ ಸಂಪುಟವನ್ನು ನೇಮಕಮಾಡಿದ್ದ. ರಾಜ್ಯಕ್ಕೆಲ್ಲ ಅನ್ವಯಿಸುವಂತೆ ಅಂಚೆ ವ್ಯವಸ್ಥೆ ಸ್ಥಾಪಿತವಾಯಿತು. ಭೂ ಮತ್ತು ಇತರ ಕಂದಾಯ ಕಾನೂನುಗಳನ್ನು ಕ್ರೋಢೀಕರಿಸಲಾಯಿತು. ಕೇಂದ್ರಾಡಳಿತವನ್ನು ಹದಿನೆಂಟು ಇಲಾಖೆಗಳಾಗಿ ವಿಭಾಗಿಸಲಾಯಿತು. ಅಧಿಕಾರಿಗಳಿಗೆ ಕೊಡಬೇಕಾದ ಸಂಬಳವನ್ನು ಅರ್ಧದಷ್ಟು ನಗದು ಹಣದ ರೂಪದಲ್ಲಿಯೂ ಉಳಿದ ಅರ್ಧವನ್ನು ಧಾನ್ಯರೂಪದಲ್ಲಿಯೂ ಪಾವತಿಮಾಡಲಾಗುತ್ತಿತ್ತು. ಪ್ರತಿನಿತ್ಯವೂ ಬೊಕ್ಕಸಕ್ಕೆ ಗೊತ್ತಾದ ಪ್ರಮಾಣದ ಹಣ ಸಲ್ಲಲೇಬೇಕೆಂಬ ನಿಯಮಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ಇದರಿಂದ ಭಂಡಾರದಲ್ಲಿ ಅಪಾರ ಹಣ ಶೇಖರವಾಗಿ ರಾಜನನ್ನು ನವಕೋಟಿನಾರಾಯಣನೆನ್ನುತ್ತಿದ್ದರು. ಆಡಳಿತ ಸುವ್ಯವಸ್ಥೆಯ ಜೊತೆಗೆ ತೂಕ ಅಳತೆಗಳನ್ನು ನಿರ್ದಿಷ್ಟಗೊಳಿಸಲಾಗಿತ್ತು. ಮಾರುಕಟ್ಟೆಗಳನ್ನು ನಿಯಂತ್ರಿಸಲಾಗಿತ್ತು. ಸೈನ್ಯಕ್ಕೆ ಬೇಕಾದ ಫಿರಂಗಿ, ಮದ್ದುಗುಂಡು ಇತ್ಯಾದಿ ಸೈನ್ಯೋಪಕರಣಗಳನ್ನು ತಯಾರಿಸುವ ಒಂದು ಕೇದ್ರವನ್ನು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲಾಗಿತ್ತು. ಕಾವೇರಿ ನದಿಗೆ ಅಣೆಕಟ್ಟೆಯನ್ನು ಕಟ್ಟಿ ಚಿಕ್ಕದೇವರಾಜ ನಾಲೆಗಳೆಂಬ ಕಾಲುವೆಗಳನ್ನೂ ನಿರ್ಮಿಸಿದ್ದಲ್ಲದೆ ಹಲವಾರು ಕೆರೆಕಟ್ಟೆಗಳನ್ನು ಕಟ್ಟಿಸಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.

	ಚಿಕ್ಕದೇವರಾಜ ಒಡೆಯರ ಅನಂತರ ದಳವಾಯಿಗಳ ಪ್ರಾಬಲ್ಯ ಹೆಚ್ಚಾಗಿ ಕೊನೆಗೆ ಹೈದರ್ ಮತ್ತು ಟಿಪ್ಪು ಇವರಿಗೆ ಆಡಳಿತ ಸೇರಿದಾಗ ಬಿಗಿ ಹೆಚ್ಚಾಗಿ ಸೈನ್ಯಕ್ಕೆ ಆಧುನಿಕ ತರಬೇತಿ ದೊರಕಿತು. ಅನಂತರ ಒಡೆಯರಿಗೆ ರಾಜ್ಯ ಹಿಂತಿರುಗಿದರೂ ಆಡಳಿತ ಪದ್ಧತಿ ಬ್ರಿಟಿಷರ ಆಳಿಕೆಯ ಪದ್ಧತಿಯಲ್ಲಿಯೇ ನಡೆಯಿತು.

	ಚಿತ್ರಕಲೆ : ಇತರ ಲಲಿತಕಲೆಗಳಿಗೆ ದೊರೆತ ಪ್ರೋತ್ಸಾಹ ಒಡೆಯರ ಕಾಲದಲ್ಲಿ ಚಿತ್ರಕಲೆಗೂ ದೊರೆಯಿತು. ವಿಜಯನಗರದ ಅನಂತರದ ಆ ಕಾಲದ ಚಿತ್ರ ಕಲೆಯನ್ನು ಅನುಸರಿಸಿ ಬೆಳೆಸಿದವರು ಮೈಸೂರು ನಡೆಯರು. ಇವರ ಕಾಲದಲ್ಲಿ ಹೇರಳವಾಗಿ ವರ್ಣಚಿತ್ರಗಳ ರಚನೆ ಆಗಿದ್ದಿರಬೇಕು. ಅದರ ವಾಸ್ತಿಶಿಲ್ಪಗಳಂತೆ ಹೆಚ್ಚು ದೃಢವಾದ ವಸ್ತುಗಳನ್ನು ಈ ಕಲೆಗೆ ಬಳಸಿಲ್ಲವಾದ್ದರಿಂದ ಅರಮನೆ, ಅಧಿಕಾರಿಗಳ ಮನೆ, ಪ್ರತಿಷ್ಠಿತರ ಗೃಹಗಳಲ್ಲಿ ಅವರ ವಿಲಾಸಕ್ಕೆ ರಟ್ಟು, ಹಲಗೆ, ತಾಟುಗಳ ಮೇಲೆ ಬರೆಸಿದ ಚಿತ್ರಗಳಲ್ಲಿ ಬಲುಪಾಲು ಕಾಲಕ್ರಮದಲ್ಲಿ ನಷ್ಟವಾಗಿದ್ದಿರಬೇಕು. ಹಾಗಲ್ಲದೆ ಇವರ ಕಾಲದಲ್ಲಿ ರಚನೆಗೊಂಡ ಭಿತ್ತಿಚಿತ್ರಗಳು ದೇವಾಲಯಗಳ ಮಠಗಳ, ಮಹಲುಗಳ ಗೋಡೆ, ಚಾವಣಿಗಳ ಮೇ, ಉಳಿದುಬಂದಿವೆ. ಜಲ ಅಥವಾ ತೈಲವರ್ಣದಿಂದ ಗೋಡೆಗಳನ್ನೋ ಚಾವಣಿಗಲನ್ನೋ ತೊಲೆಗಳನ್ನೋ ಆಧಾರವಾಗಿ ಮಾಡಿಕೊಂಡು ವಿಸ್ತಾರವಾದ ಚಿತ್ರರಚನೆ ಮಾಡಿರುವುದು ಅಲ್ಲಲ್ಲಿ ಕಂಡುಬಂದಿದೆ. ಈ ಕಾಲದ ಮೊದಲಿನ ಭಿತ್ತಿಚಿತ್ರಗಳು ವಿಜಯನಗರ ಚಿತ್ರಕಲೆಯನ್ನೇ ಹೋಲುತ್ತವೆ. ಈಗ ತಿಳಿದಿರುವ ಮಟ್ಟಿಗೆ ಬಹುಶಃ ಒಡೆಯರ ಕಾಲದ ಮೊಲದ ಚಿತ್ರಗಳೆಂದರೆ ಹರದನಹಳ್ಳಿಯಲ್ಲಿ ದಿವ್ಯಲಿಂಗೇಶ್ವರ ದೇವಾಲಯದ ಹಿಂದಿರುವ ಕೈಸಾಲೆಯ ಚಾವಣೆ ತೊಲೆಗಳ ಮೇಲೆ ರಚಿತವಾದವು. 17 ನೆಯ ಶತಮಾನದ ಪ್ರಥಮಾರ್ಧಕ್ಕೆ ಸೇರಿಸಬಹುದಾದ ಚಿತ್ರಗಳಲ್ಲಿ ಲೇಪಾಕ್ಷಿಯಲ್ಲಿಯ ವಿಜಯನಗರ ಶೈಲಿಯ ವರ್ಣಚಿತ್ರಗಳ ಮಾದರಿಯನ್ನು ಕಾಣಬಹುದು. ಚಾವಣೆಯಿಂದ ನೀರು ಸೋರಿ ಈಗ ಈ ಚಿತ್ರಗಳು ಹೆಚ್ಚುಪಾಲು ಮಾಸಲಾಗಿ ಮಸುಕಾಗಿರುವುದಾದರೂ, ಉಳಿದಿರುವಷ್ಟೇ ಚಿತ್ರಗಳು ಮೇಲ್ಮಟ್ಟವನ್ನು ಸೂಚಿಸುತ್ತದೆ. ತೊಲೆಗಳ ಮೇಲೆ, ಕೃಷ್ಣಲೀಲೆ, ಸಮುದ್ರಮಥನ, ಶಿವಲೀಲೆಗಳು, ಅಷ್ಟದಿಕ್ಪಾಲಕರು ಮುಂತಾದ ಹಲವು ಬಗೆಯ ಚಿತ್ರಣಗಳ ಸಾಲುಗಳಿರುವುವಲ್ಲದೆ ಕೆಲವು ಪ್ರಾಪಂಚಿಕ ವ್ಯವಹಾರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಲ್ಲಲ್ಲಿ ಬಿಡಿಸಿರುದು ಕುತೂಹಲಕರವಾಗಿದೆ.

ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ನಿರ್ಮಿತವಾದ ಶ್ರವಣಬೆಳಗೊಳದ ಕಲ್ಯಾಣಿಯ ಒಂದು ಎತ್ತರವಾದ ಮಂಟಪದ ಚಾವಣಿ ತೊಲೆಗಂಬಗಳ ಮೇಲೆ ಚಿತ್ರಗಳು ತುಂಬಿದ್ದಂತೆ ತೋರುತ್ತವೆ. ಆದರೆ ಈಗ ಈ ಚಿತ್ರಗಳ ಕುರುಹು ಮಾತ್ರ ಅಲ್ಲಲ್ಲಿ ಕಂಡುಬರುತ್ತದೆ. ಹಿರಿಯೂರಿನ ತೇರು, ಮಲ್ಲೇಶ್ವರ ದೇವಾಲಯದ ಮುಂದಿನ ಮಂಟಪ ಮತ್ತು ಎಡೆಯೂರು ಸಿದ್ದಲಿಂಗೇಶ್ವರ ಮಠದ ಗೋಡೆಗಳ ಮೇಲೆ ಸುಮಾರು ಇದೇ ಕಾಲದ ಚಿತ್ರಗಳನ್ನು ನೋಡಬಹುದು. ಇವು ಬಲು ಮಟ್ಟಿಗೆ ಗಿರಿಜಾಕಲ್ಯಾಣ ಮತ್ತು ಇತರ ಶಿವಲೀಲೆಗಳನ್ನು ಕುರಿತದ್ದಾಗಿದೆ.

	ಮುಂದಿನ ಘಟ್ಟಕ್ಕೆ ಸೇರಿದು ಸೀಬಿಯ ನರಸಿಂಹ ದೇವಾಲಯದಲ್ಲಿ ಮುಖಮಂಟಪ ಮತ್ತು ಮಹಾದ್ವಾರಗಳ ಒಳಚಾವಣಿ ತೊಲೆಗಳ ಮೇಲೆಲ್ಲ ತುಂಬಿ ಹೊಗಿರುವ ವರ್ಣಚಿತ್ರಗಳು. 18 ನೆಯ ಶತಮಾನದ ಉತ್ತರಾರ್ಧಕ್ಕೆ ಸೇರಿರುವ ಈ ಚಿತ್ರಗಳು ವಿಷಯ ವೈವಿಧ್ಯಕ್ಕೆ ಹಲವು ಕಥೆಗಳ ವಿವರವಾದ ದೃಶ್ಯಾವಳಿಗಳಿಗೆ ಹೆಸರಾಗಿವೆ. ಇಲ್ಲಿ ವಿಷ್ಣುವಿನ ದಶಾವತಾರಗಳು, ಶಿವಲೀಲೆಗಳು, ರಾಮಾಯಣ, ಭಾರತ, ಭಾಗವತ, ಅಪರೂಪವಾದ ನರಸಿಂಹ, ಚಂಚುಲಕ್ಷ್ಮಿಯರ ಕಥೆಗಳುಂಟು.
ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಚಿತ್ರಕಲೆಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಟಿಪ್ಪು ದರಿಯಾದೌಲತ್ ಅರಮನೆಯ ಗೋಡೆಗಳ ಮೇಲೆ ವ್ಯಕ್ತಿ ಚಿತ್ರಣಗಳನ್ನು ಬರೆಸಿದ್ದುದನ್ನು ಮಾದರಿಯಾಗಿಟ್ಟುಕೊಂಡು ಮುಮ್ಮುಡಿ ಕೃಷ್ಣರಾಜ ಒಡೆಯರು ತಾವು 1861 ರಲ್ಲಿ ಕಟ್ಟಸಿದ ಜಗನ್ಮೋಹನ ಅರಮನೆಯ ಮೇಲಂತಸ್ತಿನ ದೊಡ್ಡದಾದ ಹಜಾರ ಮತ್ತು ಇಕ್ಕೆಲಗಳಲ್ಲಿಯ ಕೋಣೆಗಳ ಗೋಡೆಗಳ ಮೇಲೆ ಬಗೆಬಗೆಯ ವರ್ಣಚಿತ್ರಗಳನ್ನು ಬರೆಸಿದ್ದಾರೆ. ಇವುಗಳಲ್ಲಿ ಸಂತಾನಾಂಬುಜ ಅದರ ಎರಡು ಕಡೆಗಳಲ್ಲಿಯೂ ಭಾರತದ ಮತ್ತು ಹೊರಗಿನ ಹಲವಾರು ರಾಜರುಗಳ ಭಾವಚಿತ್ರಗಳು, ರಾಜನ ಅನೇಕ ಬಂಧುಗಳು ಮತ್ತು ಅಧಿಕಾರಿಗಳು, ವಿಜಯದಶಮಿಯ ಜಂಬೂಸವಾರಿಯ ವೈಭವದ ಮೆರವಣಿಗೆ, ಬೇಟೆಯ ಚಿತ್ರಗಳು, ಕಲ್ಪದ್ರುಮ, ವಸಂತೋತ್ಸವ ದೃಶ್ಯಗಳು ಕುತೂಹಲಕರವಾಗಿ ಚಿತ್ರಿತವಾಗಿವೆ. ತಮ್ಮ ತಂದೆ ಚಾಮರಾಜ ಒಡೆಯರ ಜನನದ ನೆನಪಿಗಾಗಿ ಚಾಮರಾಜನಗರದಲ್ಲಿಕಟ್ಟಿಸಿದ ಜನನಮಂಟಪದಲ್ಲಿಯೂ ಗೋಡೆಗಳು ಇದೇ ರೀತಿ ವರ್ಣಚಿತ್ರಗಳಿಂದ ತುಂಬಿರುವುದನ್ನು ನೋಡಬಹುದು. ಈ ಕಾಲದ ಚಿತ್ರಮಂಟಪಗಳ ಗುಂಪಿಗೆ ಮುಡುಕುತೊರೆ ಬೆಟ್ಟದ ಮೇಲೆ ಮಲ್ಲಿಕಾರ್ಜುನ ದೇವಾಲಯ ಪ್ರಕಾರದಲ್ಲಿರುವ ಚಿತ್ರಮಂಟಪವನ್ನೂ ಸೇರಿಸಬಹುದು. ಇಲ್ಲಿ ಭಿಕ್ಷಾಟನೆ ಮೂರ್ತಿ, ದೇವಿಮಹಾತ್ಮೆ, ಗಿರಿಜಾಕಲ್ಯಾಣ, ನಟರಾಜ ಮುಂತಾದ ಚಿತ್ರಗಳಿದ್ದು ಒಂದೊಂದಕ್ಕೂ ವಿವರಣಾತ್ಮಕವಾದ ಅಂಕಿತವಿದೆ. ಈ ಮೇಲಿನ ಎಲ್ಲ ಚಿತ್ರಗಳೂ ದೇಶೀಶೈಲಿಯಲ್ಲಿಯೇ ರಚಿತವಾದವು.

	ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನೇಕ ಚಿತ್ರಕಾರರು ತಮ್ಮ ಪ್ರತಿಭೆ ತೋರಿದ್ದಾರೆ. ಇವರು ಕರ್ನಾಟಕ ಚಿತ್ರಶೈಲಿಯೊಂದಿಗೆ ಬಂಗಾಲಿ ಚಿತ್ರ ಕಲೆಯನ್ನೂ ಐರೋಪ್ಯ ಶೈಲಿಯನ್ನೂ ಮೈಗೂಡಿಸಿಕೊಂಡು ಚಿತ್ರರಚನೆ ಮಾಡಿರುವುದನ್ನು ನೋಡಬಹುದು. ಇವುಗಳಲ್ಲಿ ವೆಂಕಟಪ್ಪನವರು ಅರಮನೆಯ ಗೋಡೆಗಳ ಮೇಲೆ ಚಿತ್ರಿಸಿರುವ ದೃಶ್ಯಗಳು ಮನೋಜ್ಞವಾಗಿವೆ.
(ನೋಡಿ- ಜಯಚಾಮರಾಜೇಂದ್ರ-ಚಿತ್ರಶಾಲೆ)

	ಲಲಿತಕಲೆಗಳೂ : ಒಡೆಯರ ಆಳ್ವಿಕೆಯಲ್ಲಿ ಸಂಗೀತ, ಮೃತ್ಯ, ಮೊದಲಾದ ಇತರ ಲಲಿತ ಕಲೆಗಳಿಗೆ ಕೊಟ್ಟ ಪ್ರೋತ್ಸಾಹವೂ ಗಣನೀಯವಾದ್ದು. ಆದರೆ ಇವು ಕೇವಲ ಶ್ರವ್ಯ ಮತ್ತು ದೃಶ್ಯಗಳಾದುದರಿಂದ ಬೇರೆ ಬೇರೆ ಬೆಳೆವಣಿಗೆಗಳನ್ನೂ ಗುರುತಿಸುವುದು ಅಸಾಧ್ಯ. ಆಗ ರಚಿತವಾದ ಗ್ರಂಥಗಳಲ್ಲಿ ಕಂಡುಬರುವ ವಿಷಯಗಳಿಂದ ಮಾತ್ರ ಕೆಲಮಟ್ಟಿಗೆ ಒಡೆಯರು ಲಲಿತಕಲೆಗಳಿಗೆ ಕೊಟ್ಟ ಪ್ರೋತ್ಸಾಹವನ್ನು ಗುರುತಿಸಬಹುದು.

	ರಾಜ ಒಡೆಯನ ಅನಂತರ ಬಂದ ಚಾಮರಾಜ ಒಡೆಯ (ನೋಡಿ- ಚಾಮರಾಜ-ಒಡೆಯರು) ಸ್ವತಃ ಸಂಗೀತಪಟುವಾಗಿದ್ದ. ಚಿಕ್ಕದೇವರಾಜ (ನೋಡಿ- ಚಿಕ್ಕದೇವರಾಜ-ಒಡೆಯರ್) ಕವಿಯಾದ್ದಂತೆ ಸಂಗೀತ ತಜ್ಞನೂ ಆಗಿದ್ದ. ತಿರುವಲಾರ್ಯ (ನೋಡಿ- ತಿರುಮಲಾರ್ಯ) ಇವನ ಆಸ್ಥಾನದ ಕವಿಯಾಗಿದ್ದ. 

	ಸಂಗೀತದ ಬೆಳೆವಣಿಗೆಯಲ್ಲಿ ಮುಮ್ಮುಡಿ ಕೃಷ್ಣರಾಜರ ಪಾತ್ರಹಿರಿದಾದುದು. ಇವರು ತಮ್ಮ ಆಸ್ಥಾನದಲ್ಲಿ ಘನತೆಗೆ ತಕ್ಕಂತೆ ವಿದ್ವಾಂಸರನ್ನು ಆದರಿಸಿ ಪೋಷಿಸಿದರು. ಚಾಮರಾಜಒಡೆಯರ ಆಸ್ಥಾನದಲ್ಲಿ ಪ್ರಖ್ಯಾತರಾದ ವೀಣೆ ಶೇಷಣ್ಣ ವೀಣೆ ಸುಬ್ಬಣ್ಣ, ಮೈಸೂರು ಸದಾಶಿವರಾವ್ (ನೋಡಿ- ಮೈಸೂರು-ಸದಾಶಿವರಾವ್) ಮೊದಲಾದ ಘನವಿದ್ವಾಂಸರಿದ್ದರು. ನಾಲ್ಮಡಿ ಕೃಷ್ಣರಾಜ ಒಡೆಯರು ಸಂಗೀತಗಾರರಿಗೆ ಕೊಟ್ಟ ಉದಾರ ಆಶ್ರಯದಿಂದ ಹೊಸ ಹೊಸ ರಚನೆಗಳಿಗೂ ಕಲಾಪ್ರಾವೀಣ್ಯಕ್ಕೂ ಎಡೆಯಾಯಿತು. ಮೈಸೂರು ಸಂಗೀತಕ್ಕೆ ಪ್ರಸಿದ್ಧವಾಗಿ, ಸಂಗೀತಗಾರರನ್ನು ಮಾತ್ರವಲ್ಲದೆ ಸಂಗೀತಪ್ರಿಯರನ್ನೂ ಬಹುವಾಗಿ ಆಕರ್ಷಿಸುತ್ತಿತ್ತು. ಇವರ ಅನಂತರ ಬಂದ ಜಯಚಾಮರಾಜ ಒಡೆಯರು ಪಾಶ್ವಾತ್ಯ ಪೌರಸ್ತ್ಯ ಸಂಗೀತಗಳೆರಡರಲ್ಲಿಯೂ ನಿಷ್ಣಾತರಾಗಿದ್ದುದಲ್ಲದೆ ಸ್ವತಃ ವಾಗ್ಗೇಯಕಾರರೂ ಆಗಿದ್ದರು. ಇವರ ಹಲವು ಕೃತಿಗಳು ಪ್ರಸಿದ್ಧವಾಗಿವೆ. ನೃತ್ಯದಲ್ಲಿ ಹಿಂದಿನಿಂದ ಬೆಳದು ಬಂದಿದ್ದ ಸಂಪ್ರದಾಯವನ್ನು ಉಳಿಸಿಕೊಂಡು ಅದನ್ನು ಪ್ರೌಢವಾಗಿ ಪ್ರದರ್ಶಿಸುತ್ತಿದ್ದ ಕೆಲವು ನೃತ್ಯಗಾತಿಯರು ಈ ರಾಜರ ಆಸ್ಥಾನಗಳಲ್ಲಿಯೂ ದೇವದಾಸಿಯರಾಗಿ ದೇವಾಲಯಗಳಲ್ಲೂ ಪೋಷಣೆ ಪಡೆದು ಆ ಸಂಪ್ರದಾಯ ಪೂರ್ಣವಾಗಿ ಆಸ್ಥಾನದಲ್ಲಿದ್ದ ಜಟ್ಟಿ ತಾಯಮ್ಮ (ನೋಡಿ- ಜಟ್ಟಿ-ತಾಯಮ್ಮ) ಪ್ರಬುದ್ಧ ನೃತ್ಯಗಾರ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನೃತ್ಯ ಕಲೆ ಪುನರುಜ್ಜೀವಗೊಂಡಿತೆಂದು ಹೇಳಬಹುದು.

	ಸಾಹಿತ್ಯ: ಮೈಸೂರು ಒಡೆಯರು ಸಾಹಿತ್ಯ ಅಪರಿಮಿತವಾದ ಪ್ರೋತ್ಸಾಹವನ್ನು ಕೊಟ್ಟರು. ಕನ್ನಡ, ಸಂಸ್ಕøತವಲ್ಲದೆ ತೆಲುಗು ಸಾಹಿತ್ಯಕ್ಕೂ ಇವರಿಂದ ಪ್ರೋತ್ಸಾಹ ದೊರೆತಿರುವುದು ಕಂಡುಬರುತ್ತದೆ. ವಿವರಗಳಿಗೆ (ನೋಡಿ- ಒಡೆಯರ-ಕಾಲದ-ಕನ್ನಡ-ಸಾಹಿತ್ಯ).

	ವಾಸ್ತುಶಿಲ್ಪ : ವಿಜಯನಗರದ ಪತನಾನಂತರ ಅವರ ವಾಸ್ತು ಮತ್ತು ಶಿಲ್ಪಶೈಲಿಯನ್ನನುಸರಿಸಿ ಮುಂದುವರಿಸಿದವರಲ್ಲಿ ಮೈಸೂರಿನ ಒಡೆಯರು ಪ್ರಮುಖರು. ಆದರೆ ವಿಜಯನಗರದ ಶೈಲಿಯಲ್ಲಿ ಕಂಡುಬರುವ ಶ್ರೀಮಂತ ಸೌಂದರ್ಯವಾಗಲಿ, ಭಾವದ ಅಭಿವ್ಯಕ್ತಿಯಾಗಲಿ ಇಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

	ರಾಜ ಒಡೆಯರ ಕಾಲದಿಂದ ಆರಂಭಿಸಿ ಮೈಸೂರರಸರು ಹಲವಾರು ಗುಡಿಗೋಪುರಗಳನ್ನು ಕಟ್ಟಿಸಿದರು. ಮೇಲುಕೊಟೆಯ ಚೆಲುವರಾಯಸ್ವಾಮಿ ದೇವಾಲಯದ ಮುಂದಿನ ಮುಖಮಂಟಪದ ಕಂಬವೊಂದರ ಮೇಲಿನ ಮೂರ್ತಿಯನ್ನು ರಾಜ ಒಡೆಯರದೆಂದು ಗುರುತಿಸಲಾಗಿದ್ದು ಆ ಮಂಟಪವನ್ನು ಅವರು ಕಟ್ಟಿಸಿರುವ ಸಾಧ್ಯತೆ ಇದೆ. ಅಲ್ಲಿಯ ಕಲ್ಯಾಣಿಯ ನಿರ್ಮಾಪಕ ಐದನೆಯ ಚಾಮರಾಜ ಒಡೆಯರ್ ಅದರ ಒಂದು ಮೂಲೆಯಲ್ಲಿರುವ ಅಷ್ಟಮುಖದ ಮಂಟಪ ಸುಂದರವಾದ ಹಾಗೂ ವಿಶಿಷ್ಟವಾದ ಕೃತಿ. ಒಂದನೆಯ ಕಂಠೀರವ ನರಸರಾಜ ಒಡೆಯರ್ ಕಟ್ಟಿಸಿರುವ ಶರೀರಂಗಪಟ್ಟಣದ ನರಸಿಂಹಸ್ವಾಮಿ ದೇವಾಲಯ ದೊಡ್ಡದಾದ ಗರ್ಭಗೃಹ ಅಡ್ಡಡ್ಡಲಾಗಿರುವ ಸುಕನಾಸಿ, ಅನೇಕ ಕಂಬಗಳಿರುವ ನವರಂಗ, ಪ್ರದಕ್ಷಿಣಾಪಥ, ಪಾತಾಳಾಂಕಣ, ಪ್ರಾಕಾರಗಳು, ನಾಲ್ಕು ಮೂಲೆಗಳಲ್ಲಿಯೂ ಬೇರೆ ಬೇರೆ ಗುಡಿಗಳು. ಮಹಾದ್ವಾರ ಮತ್ತು ಹೊರಗಿನ ಮುಖಮಂಟಪಗಳಿಂದ ಕೂಡಿದೆ. ಆದರೆ ವಾಸ್ತು ಸೌಂದರ್ಯ ದೃಷ್ಟಿಯಿಂದ ಸಾಮಾನ್ಯವಾದ ಕಟ್ಟಡ ಮೈಸೂರಿನಲ್ಲಿ ತ್ರಿಣೇಶ್ವರನ ಗುಡಿಯ ಮಹಾದ್ವಾರ ಗೋಪುರ ಮತ್ತು ಚಾಮುಂಡಿ ಬೆಟ್ಟದ ಮೆಟ್ಟಲುಗಳ ಕರ್ತೃ ದೊಡ್ಡ ದೇವರಾಜ ಒಡೆಯರ್. ಚಿಕ್ಕದೇವರಾಜ ಒಡೆಯರ ಬೆಂಗಳೂರಿನಲ್ಲಿರುವ ಕೋಟೆ ವೆಂಕಟರಮಣಸ್ವಾಮಿ ದೇವಾಲಯವನ್ನು ಕಟ್ಟಿಸಿದ. ಇಲ್ಲಿಯ ದ್ರಾವಿಡ ರೀತಿಯ ಸಂಕೀರ್ಣ ಸ್ತಂಭಗಳು, ಗೋಡೆಯ ಮೇಲಿನ ಉಬ್ಬು ಶಿಲ್ಪ ಗಮನಿಸಬೇಕಾದಂಥವು. ಶ್ರೀರಂಗಪಟ್ಟಣದಲ್ಲಿ ಶ್ವೇತವರಾಹಸ್ವಾಮಿ ದೇವಾಲಯವನ್ನು ಈತ ನಿರ್ಮಿಸಿದ್ದಂತೆ ತಿಳಿದುಬರುತ್ತದೆ. ಗುಂಡ್ಲುಪೇಟೆಯಲ್ಲಿ ದೊಡ್ಡ ದೇವರಾಜರ ನೆನಪಿಗಾಗಿ ಇವನು ಕಟ್ಟಿಸಿದ ಪರವಾಸುದೇವ ದೇವಾಲಯ ಕಗ್ಗಲ್ಲಿನಲ್ಲಿ ದ್ರಾವಿಡ ರೀತಿಯಲ್ಲಿ ಕಟ್ಟಿರುವ ಮೈಸೂರರಸರ ಕಾಲದ ಉತ್ತಮವಾದ ಕಟ್ಟಡ. ಕಿರುಜಗಲಿಯ ಮೇಲಿರುವ ಈ ದೇವಾಲಯದ ಹೊರಗೋಡೆಗಳ ಮೇಲೆ ಅಲ್ಲಲ್ಲಿ ಒರಟಾದ ಅರೆಗಂಬಗಳೂ ಅರೆಗೋಪುರಗಳೂ ಇದ್ದು ವಿಶಾಲವಾದ ನವರಂಗದಲ್ಲಿ ಕಂಬಗಳ ಚೌಕಮುಖಗಳ ಮೇಲೆ ಹಲವಾರು ಮೂರ್ತಿಗಳನ್ನು ಬಿಡಿಸಲಾಗಿದೆ. ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಾಸ್ತು ಸಂಪ್ರದಾಯ ಪುನರುಜ್ಜೀವನಗೊಂಡಿತು. ಚಾಮರಾಜನಗರದ ಚಾಮರಾಜೇಶ್ವರ, ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿದೇವಾಲಯ, ಚಾಮುಂಡಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಹೊಪ್ರಕಾರ, ಮಹಾದ್ವಾರದ ಗೋಪುರ, ಪ್ರಾಕಾರದ ಸುತ್ತಲೂ ಇರುವ ಗುಡಿಗಳು, ವರುಣದಲ್ಲಿ ದೇವರಾಜಮ್ಮಣ್ಣಿಯ ಹೆಸರಿನಲ್ಲಿ ಕಟ್ಟಿಸಿರುವ ಮಹದೇಶ್ವರ ದೇವಾಲಯ ಮೊದಲಾದವು ಇವರ ರಚನೆಗಳು. ಈ ಹಲವು ದೇವಾಲಯಗಳಲ್ಲಿ ಭಾರತೀಯ ಮುಸ್ಲಿಮ್ ಸಂಪ್ರದಾಯದಿಂದ ಉದ್ಭವವಾದ ಹಲವು ಚಿತ್ತಾರಗಳು ಮತ್ತು ವಿನ್ಯಾಸಗಳನ್ನು ಗಚ್ಚಿನಲ್ಲಿ, ಪೌಳಿ ಮತ್ತು ಗೋಪುರಗಳಲ್ಲಿ ಮೂಡಿಸಿರುವುದನ್ನು ಕಾಣಬಹುದು.

	ಇಲ್ಲಿಯ ತನಕದ ಒಡೆಯರ ಕಾಲದ ವಾಸ್ತುಕಲೆಯಲ್ಲಿ ದೇಶೀ ಸಂಪ್ರದಾಯದ ಮುಂದುವರಿಕೆಯಷ್ಟೇ ಕಂಡುಬರುತ್ತದೆ. ಅದರಲ್ಲೂ ಈ ಹೆಚ್ಚಿನ ಕೃತಿಗಳನ್ನೆಲ್ಲ ವಿಜನಗರ ಶೈಲಿಯ ಅನುಕರಣೆಗಳೆಂದೇ ಹೇಳಬಹುದು. ಅದರ ವಿಜಯನಗರ ಕಾದಲ ಬೃಹತ್ ಗಾತ್ರವಾಗಲೀ ದೃಢಗಂಭೀರ ಪ್ರಮಾಣಗಳಾಗಲೀ ಈ ವಾಸ್ತುಕೃತಿಗಳಲ್ಲಿ ಕಾಣಲಾಗುವುದಿಲ್ಲ.
ಮೈಸೂರು ಸಂಸ್ಥಾನದಲ್ಲಿ ರೆಸೆಡೆಂಟರ ಆಳ್ವಿಕೆ ಆರಂಭವಾದ ಸಮಯದಿಂದದ ಮುಂದೆ ಇಲ್ಲಿ ಪಾಶ್ವಾತ್ಯ ವಾಸ್ತು ಸಂಪ್ರದಾಯ ಬೇರೂರಲಾರಂಭಿಸಿತು. ಮೈಸೂರು ಅರಸರ ಕಾಲದಲ್ಲಿ ಹಳೆಯ ದೇಶೀ ಸಂಪ್ರದಾಯಗಳು ಎಲ್ಲೋ ಕೆಲವೆಡೆ (ಉದಾ: ಶೃಂಗೇರಿಯ ಶಾರದಾ ದೇವಾಲಯ, ಮೈಸೂರು ಭುವನೇಶ್ವರಿ, ಕಾಮಕಾಮೇಶ್ವರಿ ದೇವಾಲಯಗಳು ಇತ್ಯಾದಿಗಳಲ್ಲಿ) ಕಂಡುಬರುತ್ತವೆ. ಹೆಚ್ಚಿನ ಕೃತಿಗಳು ಲೌಕಿಕ ವಾಸ್ತುವರ್ಗಕ್ಕೆ ಸೇರಿದವು. ಪಾಶ್ಚಾತ್ಯ ಶೈಲಿ ಮತ್ತು ರಚನಾ ತಂತ್ರಗಳಿಂದ ರಚಿತವಾದ ಮೈಸೂರಿನ ಲಲಿತಮಹಲ್, ಮಹಾರಾಜ ಕಾಲೇಜು, ಓರಿಯಂಟಲ್ ಲೈಬ್ರರಿ, ಶ್ರೀಕೃಷ್ಣರಾಜೇಂದ್ರ ಆಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರಿನ ಹೈಕೋರ್ಟ್ ಕಟ್ಟಡ, ಸೆಂಟ್ರಲ್ ಕಾಲೇಜು, ಅರಮನೆ ಮುಂತಾದವು ಈ ಹೊಸ ರಚನಾ ರೀತಿಯ ಉತ್ತಮ ಉದಾಹರಣೆಗಳು. ಮೈಸೂರಿನ ಅರಮನೆಯಲ್ಲೂ ಹಲವು ಪಾಶ್ಚಾತ್ಯ ಹಾಗೂ ದೇಶೀಯ ವಾಸ್ತು ಸಂಪ್ರದಾಯಗಳ ಮಿಶ್ರಣ ಇದೆ. ಮೈಸೂರಿನ ಕೃಷ್ಣರಾಜೇಂದ್ರ ಮತ್ತು ಚಾಮರಾಜೇಂದ್ರ ವೃತ್ತಗಳಲ್ಲಿ ಇರುವ ರಾಜರ ಪ್ರಕೃತಿಯನ್ನು ಸ್ಥಾಪಿಸಿರುವ ಮಂಪಟಗಳು, ಅಲಂಕರಣ ವಾಸ್ತುವಿನ ಉತ್ತಮ ರಚನೆಗಳು

	ಶಿಲ್ಪದಲ್ಲೂ ವಿಜಯನಗರ ಸಂಪ್ರದಾಯ ಅನುಕರಣೆ ಕಂಡುಬರುತ್ತದೆ. ಚಾಮುಂಡಿಬೆಟ್ಟದ ಮೇಲಿನ ದೊಡ್ಡದೇವರಾಜ ಒಡೆಯರ ಕಾಲದ ಪ್ರಸಿದ್ಧವಾಗ ಬೃಹದಾಕಾರದ ನಂದಿ ಸುಂದರ ಕೃತಿ, ಉತ್ತಮವಾಗಿ ರೂಪಿತವಾಗಿರುವ ಇನ್ನೊಂದು ಬೃಹತ್ ನಂದಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿದೆ. ಇದು ದಳವಾಯಿ ವಿಕ್ರಮರಾಯ ಮಾಡಿಸಿದ್ದು, ಗುಂಡ್ಲುಪೇಟೆಯ ಪರವಾಸುದೇವ ದೇವಾಲಯದ ಮೂಲವಿಗ್ರಹ ಒಡೆಯರ ಕಾಲದಲ್ಲಿ ಮೂರ್ತಿ ಶಿಲ್ಪಕ್ಕೆ ಒಂದು ಉತ್ತಮ ಉದಾಹರಣೆ. ಮುಖದಲ್ಲಿರುವ ವಿಶಾಲನೇತ್ರಗಳು, ತುಟಿಗಳನ್ನು ಕೊಂಕಿಸಿ ಮೂಡಿಸಿರುವ ಕೃತಕ ನಗೆ, ಗುಂಡುಮುಖ, ಕುಳ್ಳಾಗಿ ಕಾಣುವ ಸುಪುಷ್ಟ ದೇಹ, ಉದ್ದವಾಗಿ ಕಂಡರೂ ಚಪ್ಪಟೆಯಾದ ಮೂಗು, ಹೆಚ್ಚು ಗುಂಭವಾಗಿ ಬಿಡಿಸಿದ ಅಂಗಾಂಗಗಳು. ಮೂರ್ತಿ ಗಾತ್ರಕ್ಕೆ ದೊಡ್ಡದಾದ ಕಿರೀಟ, ಸೆಟೆದು ಕುಳಿತಿರುವಂತೆ ಇರುವ ಭಂಗಿ ಮುಂತಾದವನ್ನು ಗಮನಿಸಿದಾಗ ಸ್ವಾಭಾವಿಕತೆಗಿಂತಲೂ ಸಾಂಪ್ರದಾಯಿಕತೆ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ. ಚಾಮರಾಜನಗರ, ನಂಜನಗೂಡು, ಮೈಸೂರು (ಪ್ರಸನ್ನ ಕೃಷ್ಣಸ್ವಾಮಿ) ಮುಂತದೆಡೆಯ ಮುಮ್ಮುಡಿ ಕೃಷ್ಣರಾಜರ ದೇವಾಲಯಗಳಲ್ಲಿ ಅರವತ್ತಮೂರು ಪುರಾತನರು. ಆಳ್ವಾರರು, ಶಿವಲೀಲಾ ಮೂರ್ತಿಗಳು, ಬೇರೆ ಬೇರೆ ಹೆಸರಿನ ಹಲವು ಲಿಂಗಗಳು ಅಥವ ವಿಷ್ಣುವಿನ ಅವತಾರಗಳು ಇದ್ದು ಪ್ರಾಕಾರದ ಪೌಳಿಯಲ್ಲಿ ಗಣೇಶ, ಶೈವ ಅಥವಾ ವೈಷ್ಣವ ವಿಗ್ರಹಗಳು ಇತ್ಯಾದಿ ಗಚ್ಚಿನ ಮೂರ್ತಿಗಳನ್ನೂ ಕಾಣಬಹುದು. ಇವು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡುವವರಿಗೆ ತುಂಬ ಉಪಯುಕ್ತವಾಗಿದೆ.

	ಈ ಕಾಲದಲ್ಲಿ ರಾಜರ ಪ್ರತಿಕೃತಿ ವಿಗ್ರಹಗಳು ವಿಶೇಷವಾಗಿ ಕಂಡುಬರುತ್ತವೆ. ಕಂಠೀರವ ನರಸರಾಜ ಒಡೆಯರ ಭಕ್ತವಿಗ್ರಹ ಉದ್ದವಾದ ನಿಲುವಂಗಿ, ಸೊಂಟಕ್ಕೆ ಸುತ್ತಿರುವ ವಸ್ತ್ರ, ಕೈಕೆಳಗೆ ಕವಚಗಳು, ಪಕ್ಕದಲ್ಲಿ ನೇತಾಡುತ್ತಿರುವ ಕತ್ತಿಗುರಾಣಿಗಳು, ಕಲ್ಲಿಮೀಸೆ, ಚೂಪಾದ ಆದರೆ ಚಪ್ಪಟೆಯಾಗಿ ಹರಡಿರುವ ಮೂಗು, ದೊಡ್ಡದಾದ ಕಣ್ಣುಗಳು, ತಲೆಕೂದಲನ್ನು ಎತ್ತಿ ಓರೆಯಾಗಿ ಕಟ್ಟಿರುವ ಮುಡಿ, ಕೈಮುಗಿದು ನೇರವಾಗಿ ನಿಂತಿರುವ ನಿಲುವು ಇವುಗಳ ಅಳವಡಿಕೆಯಿಂದ ಆ ಕಾಲದ ಪ್ರತಿಕೃತಿ ಶಿಲ್ಪಗಳ ಉದಾಹರಣೆಯಾಗಿವೆ. ಗುಂಡ್ಲುಪೇಟೆಯ ಪರವಾಸುದೇವ ದೇವಾಲಯದ ಕಂಬವೊಂದರ ಮೇಲೆ ತನ್ನ ಪರಿವಾರದೊಂದಿಗೆ ಕುಳಿತಿರುವ ರಾಜನ ಮೂರ್ತಿ ಚಿಕ್ಕದೇವರಾಜ ಒಡೆಯರದಿರಬೇಕು. ನಂಜನಗೂಡು ಮೊದಲಾದೆಡೆಗಳಲ್ಲಿರುವ ಕೃಷ್ಣರಾಜ ಒಡೆಯರ ಮತ್ತು ಅವರ ರಾಣಿಯರ ಭಕ್ತ, ವಿಗ್ರಹಗಳು ಬಲು ನಾಜೂಕಾಗಿ ಕೆತ್ತಿದ ಉತ್ತಮ ಪ್ರತಿಮೆಗಳಾಗಿವೆ.

	ಈ ಕಾಲದ ಕಂಚಿನ ವಿಗ್ರಹಗಳು ಸಾಕಷ್ಟು ಸಂಖ್ಯೆಯಲ್ಲಿ ದೊರಕಿವೆ. 18ನೆಯ ಶತಮಾನದಲ್ಲಿ ದಳವಾಯಿ ಕಳಲೆ ನಂಜರಾಜಯ್ಯ ಮಾಡಿಸಿರುವ ನಟರಾಜ ಮೂರ್ತಿಗಳು, ಹರದನಹಳ್ಳಿ, ತೆರಕಣಾಂಬಿ, ತಲಕಾಡು ಮೊದಲಾದೆಡೆಗಳ ದೇವಾಲಯಗಳೀವೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಈತ ಅರ್ಪಿಸಿದ 63 ಪುರಾತನ ಬಿಡಿ ಭಕ್ತವಿಗ್ರಹಗಳು ಇವೆ. ಈ ವಿಗ್ರಹಗಳು ವಿಜಯನಗರ ಸಂಪ್ರದಾಯದವು. ಅಲ್ಲದೆ ಬೆಳ್ಳಿ, ತಾಮ್ರ, ಹಿತ್ತಾಳೆ ಹಾಗೂ ಕಂಚಿನಲ್ಲಿ ಮಾಡಿದ ಗರುಡ, ಬಸವ, ಅನೆ ಮುಂತಾದ ಅನೇಕ ವಾಹನಗಳು ನಂಜನಗೂಡು, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ ಮತ್ತು ಮೇಲುಕೋಟೆಯ ದೇವಾಲಯಗಳಲ್ಲಿ ಇವೆ. ಹೆಚ್ಚಿನವು ಮೈಸೂರು ಅರಸರ ಅದರಲ್ಲೂ ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಣಿಕೆಗಳು.

ಒಡೆಯರ ಕಾಲದ ಮೂರ್ತಿಗಳ ಪ್ರಮಾಣ ಕಿರಿದು. ಇವುಗಳಲ್ಲಿ ಭಾವಪೂರ್ಣತೆಯಾಗಲಿ ನಿಲವಿನಲ್ಲಿ ವಾಸ್ತವತೆಯಾಗಲಿ ಅಂಗಾಂಗಗಳಲ್ಲಿ ನಯಗಾರಿಕೆಯಾಗಲಿ ಚಲನೆಯಾಗಲಿ ಹೆಚ್ಚು ಕಾಣಿಸದು. ಸಾಂಪ್ರದಾಯಿಕವಾದ ಕಟ್ಟುಪಾಡುಗಳಿಗೊಳಗಾಗಿ ಆಗ ಬಳಕೆಯಲ್ಲಿದ್ದ ಶಿಲ್ಪಶಾಸ್ತ್ರಕ್ಕನುಗುಣವಾಗಿ ಕಂಡರಿಸಿರುವ ಇವರ ಮೂರ್ತಿಶಿಲ್ಪಗಳಲ್ಲಿ ವಿಜಯನಗರದ ಜೀವಂತ ಕಲೆ ಕೃತಕತೆಯ ಹಾದಿಯನ್ನು ತುಳಿದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

	ಶಾಸನಗಳು, ದಾಖಲೆಗಳು : ಮೈಸೂರು ಒಡೆಯರ ಕಾಲ ಶಾಸನಗಳನ್ನು ಹಾಕಿಸುತ್ತಿದ್ದ ಪರಂಪರೆಯ ಕೊನೆಘಟ್ಟ. ಈಗ ದೊರೆತಿರುವ ಈ ಕಾಲದ ಐನೂರಕ್ಕೂ ಹೆಚ್ಚು ಶಾಸನ ದಾಖಲೆಗಳನ್ನು ಮುಖ್ಯವಾಗಿ ಮೂರು ಪಂಗಡಗಳಾಗಿ ವಿಂಗಡಿಸಬಹುದು : ತಾಮ್ರಶಾಸನಗಳು, ಶಿಲಾ ಮತ್ತು ಲೋಹಶಾಸನಗಳು ಮತ್ತು ಸನ್ನದು ನಿರೂಪಗಳೂ. ಈ ಮೂರು ಪ್ರಕಾರದ ಶಾಸನಗಳೂ ಒಂದರಿಂದೊಂದು ಭಿನ್ನ ರೀತಿಯಲ್ಲಿವೆ. ಸಂಖ್ಯಾಬಲದಲ್ಲಿ ಉಳಿದ ಎರಡಕ್ಕಿಂತ ತೀರ ಕಡಿಮೆಯಾಗಿರುವ ತಾಮ್ರಶಾಸನಗಳು ಎಲ್ಲ ದೃಷ್ಟಿಯಿಂದಲೂ ಹೆಚ್ಚು ಅಮೂಲ್ಯವಾದವು.

	ತಾಮ್ರಶಾಸನಗಳೂ, ವಿಜಯನಗರದ ಅರಸರ ತಾಮ್ರಶಾಸನಗಳ ರಚನೆಯನ್ನನುಸರಿಸಿದ್ದರೂ ಅವುಗಳ ಹಲಗೆಗಳು ಗಾತ್ರದಲ್ಲಿ ದೊಡ್ಡವು; ಆಕಾರದಲ್ಲಿ ಹೆಚ್ಚು ಸುಧಾರಿಸಿವೆ. ಇವರ ಕೆಲವು ತಾಮ್ರಶಾಸನಗಳು ಬಹುಶಃ ಕರ್ನಾಟಕದ ಅರಸು ಮನೆತನಗಳಲ್ಲಿಯೇ ಅತ್ಯಂತ ದೊಡ್ಡವೆಂದು ಹೇಳಬಹುದು. ತಾಮ್ರಶಾಸನಗಳಲ್ಲಿ ಲಿಪಿ ಆರಂಭದಲ್ಲಿ ನಂದಿನಾಗರಿ; ಅನಂತರ ಕೆಲವು ಶಾಸನಗಳಲ್ಲಿ ಮೊದಲು ಪ್ರೌಢವಾದ ಕಾವ್ಯಶೈಲಿಯ ಸಂಸ್ಕøತದಲ್ಲಿದ್ದು ಅದೇ ಬಲ ವಿಷಯವನ್ನೇ ಕನ್ನಡ ಗದ್ಯದಲ್ಲಿ ಅನಂತರ ವಿವರಿಸಿರುತ್ತದೆ. ಈ ತಾಮ್ರಶಾಸನಗಳು ಬಹುತೇಕ ದತ್ತಿ ಶಾಸನಗಳಾಗಿದ್ದು ದತ್ತಿ ಬಿಟ್ ಗ್ರಾಮಗಳ ಚತುಸ್ಸೀಮಗಳನ್ನು ಮಾತ್ರ ಕನ್ನಡದಲ್ಲಿಯೇ ವಿವರಿಸಲಾಗಿದೆ. ಈ ಚತುಸ್ಸೀಮೆಗಳ ವಿವರಗಳು ಬೇರೆ ರಾಜಮನೆತನಗಳ ಶಾಸನದಲ್ಲಿ ಎಲ್ಲಿಯೂ ಕಂಡುಬರದಷ್ಟು ವಿವರಪೂರ್ಣವಾಗಿ ಕೆಲವುವೇಳೆ ಹಲವು ಹಲಗೆಗಳನ್ನಾವರಿಸುವಷ್ಟು ವಿಸ್ತಾರವಾಗಿರುತ್ತವೆ.

	ಇವರಲ್ಲಿ ದೊಡ್ಡದೇವರಾಹ, ಚಿಕ್ಕದೇವರಾಹ, ಕಂಠೀರವ ನರಸರಾಜ, ಒಂದನೆಯ ಕೃಷ್ಣರಾಜ, ಎರಡನೆಯ ಕೃಷ್ಣರಾಜ ಇವರ ಹಲವಾರು ತಾಮ್ರ ಶಾಸನಗಳೂ ದೊರೆತಿವೆ. ಇಡೆಯರ ವಂಶಾವಳಿಯನ್ನು ವಿವರವಾಗಿ ತಿಳಿಸುವ ಈ ಶಾಸನಗಳು ಮೊದಲು ವಿಷ್ಣು ಬ್ರಹ್ಮರಿಂದಾರಂಭಿಸಿ ಚಂದ್ರನ ಮೂಲಕ ಯದುರಾಯನ ತನಕ ಪೌರಾಣಿಕ ವಂಶಾವಳಿಯನ್ನು ತಿಳಿಸಿ, ಯದುರಾಯನೂ ಅವರ ವಂಶದವರೂ ದ್ವಾರಕೆಯಲ್ಲಿ ಆಳುತ್ತಿದ್ದು ಆ ವಂಶದಲ್ಲಿ ಕೆಲವರು ಕರ್ಣಾಟಕ ದೇಶಕ್ಕೆ ಬಂದು ಇಲ್ಲಿಯ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಿದರೆಂದೂ ಮಹಿಷಾಸುರ ಇವರ ರಾಜಧಾನಿಯಾಯಿತೆಂದೂ ತಿಳಿಸುವುದಲ್ಲದೆ ಮುಂದೆ ಬೆಟ್ಟದ ಚಾಮರಾಜನಿಂದಾರಂಭಿಸಿ ವಂಶಾವಳಿಯನ್ನು ವಿವರಿಸುತ್ತವೆ. ಮೊದಲಿನ ಕೆಲವು ಶಾಸನಗಳು ವಿಜಯನಗರದ ಸಾರ್ವಭೌಮತ್ವವನ್ನೊಪ್ಪಿಕೊಳ್ಳುತ್ತದೆ. ಮುಂದಿನವು ಒಡೆಯರು ಸ್ವತಂತ್ರವಾಗಿ ಅಳುತ್ತಿದ್ದುದನ್ನು ಸೂಚಿಸುತ್ತವೆ. ಚಿಕ್ಕದೇವರಾಜ, ಕೃಷ್ಣರಾಜರ ಆಸ್ಥಾನಗಳಲ್ಲಿದ್ದ ತಿರುಮಲಾರ್ಯ ಅನೇಕ ತಾಮ್ರಶಾಸನಗಳ ಕರ್ತೃ, ಸುಂದರವಾದ ಶೈಲಿಯಲ್ಲಿ ಕಾವ್ಯಮಯವಾಗಿ ಸಂಸ್ಕøತ ಕನ್ನಡಗಳೆರಡರಲ್ಲಿಯೂ ರಚಿಸಿರುವ ಈತನ ಶಾಸನ ಪದ್ಯಗಳು ಎಷ್ಟು ಸೊಗಸಾಗಿವೆಯೆಂದರೆ ಇವುಗಳಿಂದ ಮಿತ್ರವಿಂದಾಗೋವಿಂದ ನಾಟಕಕ್ಕೆ ಸಿಂಗರಾರ್ಯ ಪದ್ಯಗಳನ್ನಾರಿಸಿಕೊಂಡಿದ್ದಾನೆ. ಅಪ್ರತಿಮವೀರಚರಿತೆಯಲ್ಲಿಯೂ ಈ ಶಾಸನಗಳಲ್ಲಿಯ ಕೆಲವು ಪದ್ಯಗಳಿವೆ.

	ಈ ತಾಮ್ರಶಾಸನಗಳಲ್ಲಿ ಚಾರಿತ್ರಿಕ ವಿಷಯಗಳು ತುಂಬಿವೆ. ಚಿಕ್ಕದೇವರಾಜ ನಡೆಸಿದ ಯುದ್ಧಗಳು ಕೃಷ್ಣರಾಜ ಮಾಡಿದ ದಾನಧರ್ಮಗಳು ಮುಂತಾದ ಹಲವು ವಿವರಗಳು ಇವುಗಳಿಂದ ತಿಳಿದುಬರುತ್ತವೆ. ಈ ತಾಮ್ರಶಾಸನಗಳನ್ನುಹಾಕಿಸಿರುವ ಮುಖ್ಯ ಉದ್ದೇಶ ಅಗ್ರಹಾರಗಳನ್ನು ರಚಿಸಿ ಹಲವು ವೃತ್ತಿಗಳಾಗಿ ವಿಂಗಡಿಸಿ ದತ್ತಿ ಬಿಡುವುದು. ಅನೇಕ ಕಾರಣಗಳಿಗಾಗಿ ಅನೇಕ ಸಂದರ್ಭಗಳಲ್ಲಿ ಹೀಗೆ ಗ್ರಾಮಗಳನ್ನು ದತ್ತಿ ಬಿಟ್ಟುದ್ದುಂಟು. ದಳವಾಯಿ ಕಳಲೆ ದೇವರಾಜಯ್ಯ ಹದಿನಾಲ್ಕು ಗ್ರಾಮಗಳಿಂದ ಕೂಡಿದ ರಾಮಚಂದ್ರಪುರ ಅಗ್ರಹಾರವನ್ನು ನಿರ್ಮಿಸಿದ ವಿಷಯವನ್ನು ತಿಳಿಸುವ ನರಸೀಪುರ ತಾಲ್ಲೂಕಿನ ಅತ್ಯಂತ ದೊಡ್ಡದು.
ಶಿಲಾಶಾಸನಗಳು ಸಾಮಾನ್ಯವಾಗಿ ಗದ್ಯರೂಪದಲ್ಲಿ ಕನ್ನಡದಲ್ಲಿದ್ದು ಶಾಸನ ಹಾಕಿಸಿರುವ ಉದ್ದೇಶವನ್ನು ಮಾತ್ರ ತಿಳಿಸುವ ವಸ್ತುನಿಷ್ಠ ಶಾಸನಗಳೇ ಹೆಚ್ಚು. ಒಡೆಯರು ಹಾಕಿಸಿರುವ ಈ ಶಾಸನಗಳಲ್ಲಿ ಶಾಸನ ಹಾಕಿಸಿದ ರಾಜನ ಮೂರು ಅಥವಾ ನಾಲ್ಕು ತಲೆಮಾರಿನ ವಂಶಾವಳಿಯನ್ನು ಕೊಡುವುದು ರೂಢಿ. ಚಿಕ್ಕದೇವರಾಜರ ಕಾಲದ ಮತ್ತು ಅನಂತರದ ಕೆಲವು ಶಾಸನಗಳಲ್ಲಿ ಬಿರುದೆಂತೆಂಬರಗಂಡ, ಲೋಕೈಕವೀರ, ಶ್ರೀಮನ್ಮಹಾರಾಜಾಧಿರಾಜ, ರಾಜಪರಮೇಶ್ವರ, ಪ್ರೌಢ ಪ್ರತಾಪನಪ್ರತಿಮವೀರನರಪತಿ ಮುಂತಾದ ಬಿರುದಾವಳಿಯನ್ನು ನೋಡಬಹುದು. ದೊಡ್ಡಶಾಸನಗಳಲ್ಲಿಯೂ ಕೂಡ ಸಾಹಿತ್ಯಾಂಶ ಇಲ್ಲವೇ ಇಲ್ಲವೆನ್ನಬಹುದು. ಚಿಕ್ಕದೇವರಾಜ ಮಳವಳ್ಳಿಯಲ್ಲಿ ಶೃಂಗಾರಕೊಳವೆಂಬ ಕೊಳವನ್ನು ಕಟ್ಟಿಸಿದ ವಿಷಯವನ್ನು ತಿಳಿಸುವ ಅಲ್ಲಿಯ ಶಾಸನ ಸಂಸ್ಕøತದಲ್ಲಿ ಸುಂದರವಾದ ವೃತ್ತಗಳಿಂದ ರಚಿತವಾಗಿದ್ದುದು ಕೊನೆಯಲ್ಲಿ ಕನ್ನಡದಲ್ಲಿಯೂ ಆ ವಿಷಯವನ್ನು ತಿಳಿಸುತ್ತದೆ. ಕಲ್ಲಂಬಾಳಿನ ಹೊಯ್ಸಳರ ಕಾಲದ ದೇವಾಲಯವನ್ನು ಒಡೆಯರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿದ ವಿಷಯವನ್ನು ತಿಳಿಸುವ ಶಾಸನದ ಆರಂಭದಲ್ಲಿ `ವಾಗಾರ್ಥವಿವ` ಎಂದು ಮೊದಲಾಗುವ ರಘುವಂಶದ ಪ್ರಸಿದ್ಧವಾದ ಶ್ಲೋಕವನ್ನು ಕೊಟ್ಟಿರುವುದೊಂದು ವಿಶೇಷ. ಕಂಠೀರವ ನರಸರಾಜ ಕಂಠೀರಾಯ ಹಣವನು ಟಂಕಿಸಿದುದನ್ನು ಒಂದು ಶಾಸನ ತಿಳಿಸಿದರೆ ಮತ್ತೆರಡು ಶಾಸನಗಳು ಕಾಶಿ, ಗಯಾ ಪ್ರಯಾಗಗಳಲ್ಲಿ ದಾನಧರ್ಮಗಳಿಗಾಗಿ ಈ ರಾಜ ದತ್ತಿ ಬಿಟ್ಟುದ್ದನ್ನು ತಿಳಿಸುತ್ತವೆ. ಪವಾಡಗಳನ್ನು ತಿಳಿಸುವ ಕೆಲವು ಶಾಸನಗಳೂ ಉಂಟು. 1818 ರಲ್ಲಿ ಮೈಲಿಬೆನೆ ಮತ್ತು ಕಾಲರ ಹರಡಿದಾಗ ನಂಜಮ್ಮ ಎಂಬ ಕನ್ಯೆಯ ಮೇಲೆ ಕೊಲ್ಲಾಪುರದ ಮಹಾಲಕ್ಷ್ಮಿ ಮತ್ತು ಉಜ್ಜಯಿನಿಯ ಮಹಾಕಾಳಿಯರು ಆವಿರ್ಭವಿಸಿ ಎಲ್ಲ ವರ್ಣದವರಿಗೂ ರೋಗಾದ್ಯುಪದ್ರವಗಳನ್ನು ಪರಿಹರಿಸಿದುದಾಗಿ ಕನ್ನಂಬಾಡಿಯ ಶಾಸನವೊಂದು ತಿಳಿಸುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ನೂರಾರು ಶಾಸನಗಳಿದ್ದರೂ ಅವು ಹೆಚ್ಚಾಗಿ ಮೂರ್ತಿಗಳ ಪೀಠದ ಮೇಲೆ, ಒಡವೆಗಳ ಮೇಲೆ ದೇವಾಲಯಗಳ ಪಾತ್ರೆಗಳ ಮೇಲೆ, ಉತ್ಸವ ವಿಗ್ರಹಗಳ ಮೇಲೆ ಇರುವ ಕಿರುಶಾಸನಗಳು, ನಂಜನಗೂಡು. ಚಾಮರಾಜ, ಮೈಸೂರು, ಮೇಲುಕೋಟೆ, ಶ್ರೀರಂಗಪಟ್ಟಣ ಮುಂತಾದ ಅನೇಕ ಕಡೆ ದೇವಾಲಯಗಳಿಗೆ ನೂರಾರು ಲೋಹ ಮತ್ತು ಶಿಲಾಮೂರ್ತಿಗಳನ್ನು ಮಾಡಿಸಿದುದಲ್ಲದೆ ಅವುಗಳ ಮೇಲೆ ಮೂರ್ತಿಗಳ ಹೆಸರು ಮತ್ತು ಅವನ್ನು ಮಾಡಿಸಿದವರ ಹೆಸರುಗಳಿವೆ. ಈ ಶಾಸನಗಳಲ್ಲಿ ವಿಷಯ ವೈವಿದ್ಯತೆ ಕಡಿಮೆ. ಸನ್ನದುಗಳು, ನಿರೂಪಗಳು, ರಹದಾರಿ ಪತ್ರಗಳು ಮುಂತಾದ ಕೈಯಲ್ಲಿ ತಯಾರು ಮಾಡಿದ ಹಾಳೆಗಳ ಮೇಲಿರುವ ಐತಿಹಾಸಿಕ ದಾಖಲೆಗಳ ಸಂಖ್ಯೆಯೂ ಹೇರಳವಾಗಿವೆ.

	ನಾಣ್ಯಗಳು : ಮೈಸೂರು ಒಡೆಯರ ನಾಣ್ಯಗಳು ಇಕ್ಕೇರಿಯ ನಾಣ್ಯಗಳನ್ನೇ ವಿಶೇಷವಾಗಿ ಹೋಲುತ್ತವೆ. ಇವರು ಚಿನ್ನ, ಬೆಳ್ಳೀ ಮತ್ತುತಾಮ್ರಗಳಲ್ಲಿ ನಾಣ್ಯಗಳನ್ನು ಅಚ್ಚುಹಾಕಿಸಿದ್ದರೂ ಚಿನ್ನ ಮತ್ತು ತಾಮ್ರದ ನಾಣ್ಯಗಳೇ ವಿಶೇಷವಾಗಿ ದೊರೆತಿವೆ. ಈ ಮನೆತನದ ರಾಜರಲ್ಲಿ ಮೊಟ್ಟಮೊದಲನೆಯದಾಗಿ ನಾಣ್ಯಗಳನ್ನು ಅಚ್ಚುಹಾಕಿಸಿದವ ಕಂಠೀರವ ನರಸರಾಜ ಒಡೆಯರ್. ಇವನು ಹಣಗಳನ್ನು ಮಾತ್ರ ಟಂಕಿಸಿದ. ಇವು `ಕಂಠೀರಾಯ` ಹಣವೆಂದೇ ಹೆಸರಾಯಿತು. ಕಾಲಕ್ರಮದಲ್ಲಿ ದಿವಾನ ಪೂರ್ಣಯ್ಯ ಇದೇ ರೀತಿಯ ಹಣವನ್ನು ಅಚ್ಚುಹಾಕಿಸಿದ. ಚಿಕ್ಕದೇವರಾಜ ಒಡೆಯರ್ ವರಹ ಮತ್ತು ಹಣಗಳನ್ನು ಚಿನ್ನದಲ್ಲಿ ಟಂಕಿಸಿದ. ಇದೇ ಕಾಲದಲ್ಲಿ 46 ಮತ್ತು 23 ಗ್ರೇನ್ ತೂಕದ ತಾಮ್ರದ ನಾಣ್ಯಗಳು ಬಳಕೆಯಲ್ಲಿದ್ದವು. ಇವುಗಳು ಯಾರ ಕಾಲದ ನಾಣ್ಯಗಳೆಂದು ಖಚಿತವಾಗಿ ತಿಳಿದಿಲ್ಲವಾದರೂ ಕೆಲವು ವಿದ್ವಾಂಸರು ಇವುಗಳನ್ನು ಚಿಕ್ಕದೇವರಾಜನದ್ದೆಂದೂ ಸಂಖ್ಯೆಗಳು ಇದು ಅವನ ಆಳ್ವಿಕೆಯ ವರ್ಷಗಳೆಂದೂ ಭಾವಿಸುತ್ತಾರೆ.

	ತಾತ್ಕಾಲಿಕವಾಗಿ ಮಹಮ್ಮದೀಯರ ಆಳ್ವಿಕೆಗೆ ಒಳಪಟ್ಟಿದ್ದ ಮೈಸೂರು ಸಂಸ್ಥಾನ ಸ್ವತಂತ್ರವಾದ ಅನಂತರ ಮೈಸೂರು ಅರಸರು ತಮ್ಮ ನಾಣ್ಯಗಳನ್ನು ಮತ್ತೆ ಅಚ್ಚುಮಾಡಲು ಪ್ರಾರಂಭಿಸಿದರು. ಮುಮ್ಮುಡಿ ಕೃಷ್ಣರಾಜ ಒಡೆಯರು ಬಾಲಕನಾಗಿದ್ದಾಗ ರೀಜೆಂಟನಾಗಿದ್ದ ದಿವಾನ್ ಪೂರ್ಣಯ್ಯ ಇಕ್ಕೇರಿಯ ವರಹಗಳ ಒಡೆಯರು ಮಾದರಿಯಲ್ಲಿ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ. ಹೊಸ ಇಕ್ಕೇರಿ ವರಹ ಎಂದು ಇವು ಪ್ರಸಿದ್ದವಾಗಿದ್ದವು. ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ವಹಿಸಿಕೊಂಡ ಮೇಲೆ ಪೂರ್ಣಯ್ಯ ಹಾಕಿಸಿದ್ದ ನಾಣ್ಯಗಳನ್ನೇ ಸ್ವಲ್ಪ ಬದಲಾವಣೆಯೊಂದಿಗೆ ಮುಂದುವರಿಸಿದರು. ಇವುಗಳಿಗೆ (ಕರ್ತರ್) ರಾಜ ಇಕ್ಕೇರಿ ವರಹವೆಂದೂ ಹೆಸರಿದ್ದಿತ್ತು. ಇವರು ಹೊಸ ನಮೂನೆಯ ತಾಮ್ರದ ಪೈಸೆಗಳನ್ನೂ ಮುದ್ರಿಸಲು ಆರಂಭಿಸಿದರು. ಇವುಗಳಲ್ಲಿ ಅನೇಕ ನಮೂನೆಗಳನ್ನು ಕಾಣಬಹುದು. ಮೊದಲು ಅಚ್ಚಾದದ್ದು ಆನೆಕಾಸು ಎಂದು ಕರೆಯಲಾದ ನಾಣ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ